ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ದರೂರು ಗ್ರಾಮದಲ್ಲಿ ಅಬಕಾರಿ ನಿಯಮಗಳನ್ನು ಗಾಳಿಗೆ ತೂರಿ ಬೆಳಂ ಬೆಳಿಗ್ಗೆಯೇ ಬಾರ್ ತೆರೆಯಲಾಗಿದೆ. ಮಕ್ಕಳು ಶಾಲೆಗೆ ತೆರಳುವ ಮುನ್ನವೇ ಮದ್ಯದಂಗಡಿಗಳು ಬಾಗಿಲು ತೆರೆಯುತ್ತಿದ್ದು, ವಿದ್ಯಾರ್ಥಿಗಳಿಗೆ ಬಾರ್ ದರ್ಶನವಾಗುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಅಥಣಿ ತಾಲೂಕಿನ ದರೂರು ಗ್ರಾಮದಲ್ಲಿರುವ ಸನ್ ಲೈಟ್ ಸೋಶಿಯಲ್ ಕ್ಲಬ್ ಮಾಲೀಕರು ನಿಗದಿತ ನಿಯಮಗಳನ್ನು ಉಲ್ಲಂಘಿಸಿ ಬೆಳಂಬೆಳಗ್ಗೆಯೇ ಬಾರ್ ತೆರೆದು ಅಂಧಾ ದರ್ಬಾರ್ ನಡೆಸುತ್ತಿದ್ದಾರೆ. ಶಾಲೆಗೆ ತೆರಳುವ ಕಂದಮ್ಮಗಳು ಹಾಗೂ ವಿದ್ಯಾರ್ಥಿಗಳು ಅದೇ ಮಾರ್enವಾಗಿ ಸಂಚರಿಸಬೇಕಿದ್ದು, ಮುಂಜಾನೆಯೇ ಮದ್ಯದಂಗಡಿಗಳು ತೆರೆದಿರುವುದರಿಂದ ಮಕ್ಕಳಿಗೆ ಕೆಟ್ಟ ವಾತಾವರಣದ ದರ್ಶನವಾಗುತ್ತಿದೆ. ಸ್ಥಳೀಯ ಆಡಳಿತ ಹಾಗೂ ಅಬಕಾರಿ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಹಾಗೂ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ, ನಿಯಮ ಮೀರಿ ಮುಂಜಾನೆಯೇ ಬಾರ್ ತೆರೆಯುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
