Dharwad

ಸರ್ಕಾರಕ್ಕೆ ಒಂದು ವಾರ ಗಡುವು: ಬೇಡಿಕೆ ಈಡೇರದಿದ್ದರೆ ಧಾರವಾಡದಲ್ಲಿ ಅನಿರ್ದಿಷ್ಟಾವಧಿ ಧರಣಿ – ಆಕ್ಸಾ ಸಂಘಟನೆ ಎಚ್ಚರಿಕೆ

Share

ಕೆಪಿಎಸ್‌ಸಿಯಲ್ಲಿ ನಡೆದಿದೆಯೆನ್ನಲಾದ ಅಕ್ರಮದ ತನಿಖಾ ಜವಾಬ್ದಾರಿಯನ್ನು ಸಿಬಿಐಗೆ ವಹಿಸಬೇಕು ಹಾಗೂ ಪೊಲೀಸ್ ಕಾನ್‌ಸ್ಟೇಬಲ್ ಮರು ಪರೀಕ್ಷೆ ನಡೆಸಬೇಕು. ಇದರ ಜೊತೆಗೆ ವಿವಿಧ ಬೇಡಿಕೆಗಳನ್ನು ಸರ್ಕಾರ ಒಂದು ವಾರದೊಳಗೆ ಈಡೇರಿಸಲು ಕ್ರಮ ವಹಿಸಬೇಕು; ಇಲ್ಲವಾದಲ್ಲಿ ಧಾರವಾಡದಲ್ಲಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಕೈಗೊಳ್ಳಲಾಗುವುದು ಎಂದು ಆಕ್ಸಾ ಸಂಘಟನೆಯ ಮುಖ್ಯಸ್ಥ ಕಾಂತಕುಮಾ‌ರ್ ಸರ್ಕಾರಕ್ಕೆ ಎಚ್ಚರಿಕೆ‌ ನೀಡಿದ್ದಾರೆ.‌

ಈ ಕುರಿತು ಧಾರವಾಡದಲ್ಲಿ ಮಾಧ್ಯಮಗೋಷ್ಠಿಯಲ್ಲಿ‌ ಮಾತನಾಡಿದ ಅವರು, “ಉದ್ಯೋಗಾಕಾಂಕ್ಷಿಗಳು ಹಾಗೂ ವಿದ್ಯಾರ್ಥಿಗಳು ಅನಿರ್ದಿಷ್ಟಾವಧಿ ಧರಣಿಯಲ್ಲಿ ಭಾಗವಹಿಸಲಿದ್ದಾರೆ. ಪ್ರತಿಭಟನೆಗೆ ಪೊಲೀಸರು ಅವಕಾಶ ನೀಡಲಿ, ನೀಡದಿರಲಿ ನಮ್ಮ ಹೋರಾಟ ನಡೆಯಲಿದೆ. ಸರ್ಕಾರ ಪೊಲೀಸರ ಮೂಲಕ ಬೆದರಿಸಿ ನಮ್ಮ ಹೋರಾಟವನ್ನು ಹತ್ತಿಕ್ಕಲು ಯತ್ನಿಸುತ್ತಿದೆ. ಪೊಲೀಸ್ ಪರೀಕ್ಷೆಯ ವೇಳೆ 140 ಒಎಂಆರ್ ಶೀಟ್‌ಗಳನ್ನು ಒದಗಿಸಿಲ್ಲ ಹಾಗೂ ಪ್ರಶ್ನೆ ಪತ್ರಿಕೆ ಮಿಸ್ ಮ್ಯಾಚ್ ಆಗಿದೆ. ಇದರಲ್ಲಿ ಸರ್ಕಾರ ಮೋಸ ಮಾಡುತ್ತಿದೆ. ಸರ್ಕಾರ 75 ಸಾವಿರ ಉದ್ಯೋಗ ಭರ್ತಿ ಮಾಡುವ ಭರವಸೆ ನೀಡಿದೆ, ಆದರೆ ಅದಕ್ಕೆ ಯಾವುದೇ ಇವೆಂಟ್ ಕ್ಯಾಲೆಂಡರ್ ಪ್ರಕಟಿಸಿಲ್ಲ. ಸುಮ್ಮನೆ ಬೇಕಾಬಿಟ್ಟಿ ಮಾಧ್ಯಮಗಳಲ್ಲಿ ಹೇಳಿಕೆ ನೀಡುತ್ತಿದೆ. ರಾಜ್ಯದಲ್ಲಿ ಸುಮಾರು 3 ಲಕ್ಷ ಹುದ್ದೆಗಳು ಖಾಲಿ ಇವೆ. ಅಗ್ನಿಶಾಮಕ ದಳ ಸೇರಿದಂತೆ ಹಲವು ಇಲಾಖೆಗಳ ಪರೀಕ್ಷೆ ನಡೆಸಿ ಭರ್ತಿ ಮಾಡಬೇಕು” ಎಂದು ಕಾಂತಕುಮಾರ್ ಆಗ್ರಹಿಸಿದರು.

“ಬಡತನದಿಂದ ಬಂದವರಿಗೆ ಉದ್ಯೋಗ ಸಿಕ್ಕರೆ ಸಾಕಾಗಿದೆ. ಈ ಹುದ್ದೆಗಳು ಪಾರದರ್ಶಕ ಪರೀಕ್ಷೆಗಳ ಮೂಲಕ ಭರ್ತಿಯಾಗಬೇಕು. ಸರ್ಕಾರ ಐದು ವರ್ಷ ವಯೋಮಿತಿ ಸಡಿಲಿಕೆ ನೀಡಿದ್ದರೂ, ಶಿಕ್ಷಣ ಇಲಾಖೆಗೆ ಇದನ್ನು ಅನ್ವಯಿಸಿಲ್ಲ. ಇದಕ್ಕಾಗಿ ಯಾರಾದರೂ ನ್ಯಾಯಾಲಯಕ್ಕೆ ಹೋದರೆ ಮತ್ತೆ ಸಮಸ್ಯೆಯಾಗಲಿದೆ. ಆದ್ದರಿಂದ ಕೂಡಲೇ ವಯೋಮಿತಿ ಸಡಿಲಿಕೆ ಮಾಡಿ; ಇದನ್ನು ನಾವು ಸುಮ್ಮನೆ ಕೇಳುತ್ತಿಲ್ಲ, ಇದು ನಮ್ಮ ಹಕ್ಕು. ರಾಜ್ಯದಲ್ಲಿ ದೈಹಿಕ ಶಿಕ್ಷಕರ ನೇಮಕವಾಗಬೇಕು, ಪಿಎಸ್‌ಐ ಹುದ್ದೆಗಳ ಭರ್ತಿಯನ್ನು ಹೆಚ್ಚಿಸಬೇಕು. ಗೃಹ ಸಚಿವರು ಪೊಲೀಸ್‌ ಇಲಾಖೆಯ ಎಲ್ಲ ಸಮಸ್ಯೆಗಳನ್ನು ಇತ್ಯರ್ಥಪಡಿಸಬೇಕು. ಯುಪಿಎಸ್‌ಸಿ ಮಾದರಿಯಲ್ಲಿ ಯಾವುದೇ ಪರೀಕ್ಷೆಗೆ ನೂರು ರೂಪಾಯಿ ಮಾತ್ರ ಶುಲ್ಕ ನಿಗದಿಪಡಿಸಬೇಕು. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಸಕಾರಾತ್ಮಕವಾಗಿ ಸ್ಪಂದಿಸಬೇಕು. ವಿದ್ಯಾರ್ಥಿಗಳಿಗೆ ಒಳ್ಳೆಯದಾಗುವುದಿದ್ದರೆ ಯಾವುದೇ ರಾಜಕೀಯ ಪಕ್ಷಗಳು ನಮ್ಮ ಜೊತೆ ಕೈಜೋಡಿಸಬಹುದು” ಎಂದು ತಿಳಿಸಿದರು.

Tags:

error: Content is protected !!