ಚಿಕ್ಕೋಡಿ:ಯುವಜನರು ಹಾಗೂ ಸಾರ್ವಜನಿಕರಲ್ಲಿ ಮಾದಕ ವಸ್ತುಗಳು ಮತ್ತು ವಿವಿಧ ರೀತಿಯ ವ್ಯಸನಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವುದು ಹಾಗೂ ಆರೋಗ್ಯಕರ, ಸಕಾರಾತ್ಮಕ ಮತ್ತು ಮೌಲ್ಯಾಧಾರಿತ ಜೀವನಶೈಲಿಯನ್ನು ಉತ್ತೇಜಿಸುವುದು ಈ ಅಭಿಯಾನದ ಪ್ರಮುಖ ಉದ್ದೇಶವಾಗಿದೆ ಎಂದು ಚಿಕ್ಕೋಡಿಯ ಪ್ರಜಾಪಿತಾ ಬ್ರಹ್ಮಾಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯದ ಮಾತೋಶ್ರೀ ಬಿ.ಕೆ.ಶಾಂತಾ ಹೇಳಿದರು.

ಅವರು ಇಂದು ಚಿಕ್ಕೋಡಿಯ ಕೆ.ಎಲ್.ಇ. ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯಲ್ಲಿ ಹಮ್ಮಿಕೊಂಡಿದ್ದ ಪ್ರಜಾಪಿತಾ ಬ್ರಹ್ಮಾಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯ, ಚಿಕ್ಕೋಡಿ ವತಿಯಿಂದ 10 ಕೋಟಿ ನಶಾಮುಕ್ತಿ ಪ್ರತಿಜ್ಞಾ ಮಹಾ ಅಭಿಯಾನ 2026” ಅಂಗವಾಗಿ ರಾಷ್ಟ್ರೀಯ ಮಟ್ಟದ ಜಾಗೃತಿ ಮತ್ತು ಪ್ರತಿಜ್ಞಾ ಕಾರ್ಯಕ್ರಮವಕ್ಕೆ ಚಾಲನೆ ನೀಡಿ ಮಾತನಾಡುತ್ತಾ ಮಾದಕ ವ್ಯಸನವು ವ್ಯಕ್ತಿಯ ಜೀವನ, ಕುಟುಂಬ ಮತ್ತು ಸಮಾಜವನ್ನು ಹಾಳು ಮಾಡುತ್ತದೆ. ವ್ಯಸನವು ಯುವಕರ ಭವಿಷ್ಯವನ್ನು ಕಸಿದುಕೊಳ್ಳುವುದಲ್ಲದೆ, ಕುಟುಂಬಗಳ ನೆಮ್ಮದಿಯನ್ನೂ ಹಾಳು ಮಾಡುತ್ತದೆ ಎಂದು ಹೇಳಿದರು. ನಶಾ ಮುಕ್ತ ಯುವಕರೇ ವಿಕಸಿತ ಭಾರತದ ನಿಜವಾದ ಶಕ್ತಿ. ಪ್ರತಿಯೊಬ್ಬ ವಿದ್ಯಾರ್ಥಿಗಳು ಮಾದಕ ವ್ಯಸನದಿಂದ ದೂರವಿದ್ದು, ಆರೋಗ್ಯಕರ ರಾಷ್ಟ್ರ ನಿರ್ಮಾಣದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕೆಂದು ಹೇಳಿದರು.
ಕೆ.ಎಲ್.ಇ. ಆಯುರ್ವೇದ ಕಾಲೇಜಿನ ಪ್ರಾಚಾರ್ಯರಾದ ಡಾ. ಕಿರಣಕುಮಾರ ಮುತ್ನಾಳಿ ಮಾತನಾಡುತ್ತಾ ಮಾದಕ ವಸ್ತುಗಳ ಸೇವನೆಯು ದೈಹಿಕ, ಮಾನಸಿಕ, ಸಾಮಾಜಿಕ ಹಾಗೂ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವುದಲ್ಲದೆ, ಕುಟುಂಬದ ನೆಮ್ಮದಿ ಹಾಗೂ ರಾಷ್ಟ್ರದ ಅಭಿವೃದ್ಧಿಗೂ ಧಕ್ಕೆಯನ್ನುಂಟು ಮಾಡುತ್ತದೆ ಎಂದು ತಿಳಿಸಿದರು. ವ್ಯಸನದಿಂದ ದೂರವಿದ್ದು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.
ಕಾರ್ಯಕ್ರಮವನ್ನು ಡಾ.ಕೋಮಲ ಜಾಧವ ಸ್ವಾಗತಿಸಿ ನಿರೂಪಿಸಿದರು, ವಂದನಾರ್ಪಣೆಯನ್ನು ಡಾ. ಸುದಿಂದ್ರ ಹೊನವಾಡ ನೇರವೇರಿಸಿದರು ಕಾರ್ಯಕ್ರಮದಲ್ಲಿ ಪ್ರಜಾಪಿತಾ ಬ್ರಹ್ಮಾಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯದ ವಿರೂಪಾಕ್ಷ ಲಾಟ್ಕರ, ಕೇದಾರ ನೈಲ್, ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಬಿ ಬಿ ದೇಸಾಯಿ, ಡಾ.ಸಂತೋಷ ಶಿವಣ್ಣವರ, ಡಾ. ರವಿ ಮಡಿವಾಳರ, ಡಾ. ಶ್ರೀಧರ ಲಕ್ಕುಂಡಿ ಮತ್ತು ಉಪನ್ಯಾಸಕರು, ವೈದ್ಯರು, ವಿಭಾಗಗಳ ಮುಖ್ಯಸ್ಥರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದರು.
