ತಂದೆ ಸಿದ್ದರಾಮಯ್ಯನವರಂತೆಯೇ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಅಹಿಂದ ಸಮುದಾಯದ ನೇತೃತ್ವ ವಹಿಸಿಕೊಂಡು ಹೋರಾಟ ಮುಂದುವರಿಸಬೇಕೆಂದು ಬೆಳಗಾವಿಯಲ್ಲಿ ನಡೆದ ಜಿಲ್ಲಾಮಟ್ಟದ ಅಹಿಂದ ಮುಖಂಡರ ಸಮಾವೇಶದಲ್ಲಿ ಒಕ್ಕೊರಲಿನ ಆಗ್ರಹ ಕೇಳಿಬಂದಿದೆ.
ಬೆಳಗಾವಿ ನಗರದ ಖಾಸಗಿ ಹೋಟೆಲ್‌ನಲ್ಲಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಜಿಲ್ಲಾಮಟ್ಟದ ಅಹಿಂದಾ ಮುಖಂಡರ ಸಭೆ ಯಶಸ್ವಿಯಾಗಿ ನಡೆಯಿತು.


ಸಭೆಯನ್ನು ಉದ್ದೇಶಿಸಿ ಮಾತನಾಡಿದ ಬುಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಸಚಿವ ಸತೀಶ್ ಜಾರಕಿಹೊಳಿ ಅವರು ಇಡೀ ರಾಜ್ಯದಾದ್ಯಂತ ಬೀದರ್‌ನಿಂದ ಚಾಮರಾಜನಗರದವರೆಗೆ ಅಹಿಂದ ಸಂಘಟನೆಯ ಜಾಲವನ್ನು ವಿಸ್ತರಿಸಿದ್ದಾರೆ ಎಂದರು. ಇದೀಗ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರನ್ನು ಮುನ್ನೆಲೆಗೆ ತಂದು, ಯುವ ಸಮುದಾಯವನ್ನು ಒಂದೇ ವೇದಿಕೆಯಡಿ ತರುವ ಮೂಲಕ ದೇಶದ ಪ್ರಗತಿಗೆ ಯುವಕರೇ ಆಧಾರ ಎಂಬ ಸಂದೇಶ ನೀಡಲಾಗುತ್ತಿದೆ ಎಂದು ತಿಳಿಸಿದರು. ತಂದೆ ಸಿದ್ದರಾಮಯ್ಯನವರಂತೆಯೇ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಅಹಿಂದ ಸಮುದಾಯದ ನೇತೃತ್ವ ವಹಿಸಿಕೊಂಡು ಹೋರಾಟ ಮುಂದುವರಿಸಬೇಕು. ರಾಜ್ಯದ ಪ್ರತಿ ಜಿಲ್ಲೆಗೂ ತಿಂಗಳಿಗೊಮ್ಮೆ ಪ್ರವಾಸ ಮಾಡಿ, ಅವಕಾಶವಂಚಿತ ಹಿಂದುಳಿದ, ದಲಿತ ಹಾಗೂ ಅಲ್ಪಸಂಖ್ಯಾತ ಸಮುದಾಯದ ಮುಖಂಡರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕು ಎಂದು ಕರೆ ನೀಡಲಾಯಿತು. ಯಾವುದೇ ಹಣ ಅಥವಾ ವಾಹನಗಳ ಆಮಿಷವಿಲ್ಲದೆ ಸ್ವಯಂಪ್ರೇರಿತರಾಗಿ ಆಗಮಿಸಿರುವ ಜನರ ಪ್ರೀತಿ-ವಿಶ್ವಾಸಕ್ಕೆ ತಕ್ಕಂತೆ ಅಹಿಂದ ಸಂಘಟನೆಯನ್ನು ಮತ್ತಷ್ಟು ಬಲಪಡಿಸಬೇಕು ಹಾಗೂ ಮುಂಬರುವ ದಿನಗಳಲ್ಲಿ ಅಹಿಂದ ವರ್ಗದವರೇ ರಾಜ್ಯದ ಮುಖ್ಯಮಂತ್ರಿಯಾಗುವಂತೆ ಶ್ರಮಿಸಬೇಕು ಎಂದು ನಾಯಕರು ಮನವಿ ಮಾಡಿದರು.

ಸಭೆಯಲ್ಲಿ ಶಾಸಕ ವಿಶ್ವಾಸ ವೈದ್ಯ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ ರಾಹುಲ್ ಜಾರಕಿಹೊಳಿ ಸೇರಿದಂತೆ ಹಲವು ಪ್ರಮುಖ ನಾಯಕರು ಭಾಗವಹಿಸಿದ್ದರು.
