ಮಾಜಿ ಸಚಿವ ಸಿ.ಟಿ. ರವಿ ಅವರು ನೀಟ್ ಪ್ರತಿಭಟನೆಯ ವೇಳೆ ನೀಡಿರುವ ಹೇಳಿಕೆಯನ್ನು ಖಂಡಿಸಿ ಕರ್ನಾಟಕ ರಾಜ್ಯ ಮುಲ್ಲಾ ಅಸೋಸಿಯೇಷನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಮುಲ್ಲಾ ಸಮಾಜದ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಸಿ.ಟಿ. ರವಿ ಅವರು ಕೂಡಲೇ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಕಾನೂನು ಹೋರಾಟ ಸೇರಿದಂತೆ ವಿವಿಧ ರೀತಿಯ ಪ್ರತಿಭಟನೆ ನಡೆಸುವುದಾಗಿ ಅಸೋಸಿಯೇಷನ್ ಎಚ್ಚರಿಕೆ ನೀಡಿದೆ.

ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಮುಲ್ಲಾ ಅಸೋಸಿಯೇಷನ್ ಮುಖಂಡ ಎಂ.ಸಿ. ಮುಲ್ಲಾ, ದೆಹಲಿಯ ಜಂತರ್ ಮಂತರ್ನಲ್ಲಿ ನಡೆದ ನೀಟ್ ಹೋರಾಟದ ಕುರಿತು ಮಾತನಾಡುವ ವೇಳೆ ಸಿ.ಟಿ. ರವಿ ಅವರು “ಮುಲ್ಲಾಗಳ ಕೆಲಸವೇನು” ಎಂದು ಹೇಳಿ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿದರು. ಮುಲ್ಲಾ ಎಂಬುದು ಧಾರ್ಮಿಕ ಮತ್ತು ಐತಿಹಾಸಿಕ ಹಿನ್ನೆಲೆಯ ಹೆಸರಾಗಿದ್ದು, ಇಡೀ ಸಮುದಾಯವನ್ನು ಹೀಯಾಳಿಸುವ ರೀತಿಯ ಹೇಳಿಕೆಗಳನ್ನು ನೀಡಿರುವುದು ಖಂಡನೀಯ ಎಂದು ಹೇಳಿದರು. ರಾಜಮಹಾರಾಜರ ಕಾಲದಿಂದಲೂ ಮುಲ್ಲಾಗಳಿಗೆ ಮಾನ್ಯತೆ ಹಾಗೂ ಇನಾಮು ಗಳನ್ನು ನೀಡಲಾಗಿದೆ. ಈಗ ತಾವು ಒಬ್ಬ ವ್ಯಕ್ತಿಯನ್ನು ಮಾತ್ರ ಉದ್ದೇಶಿಸಿ ಮಾತನಾಡಿದ್ದೇನೆ ಎಂದು ಸಿ.ಟಿ. ರವಿ ಹೇಳುತ್ತಿರುವುದು ಜವಾಬ್ದಾರಿಯಿಂದ ತಪ್ಪಿಸಿ ಕೊಳ್ಳುವ ಪ್ರಯತ್ನವಾಗಿದೆ ಎಂದು ಟೀಕಿಸಿದರು. ಶಿಸ್ತು ಮತ್ತು ಸಂಸ್ಕಾರದ ಬಗ್ಗೆ ಮಾತನಾಡುವ ಆರ್ಎಸ್ಎಸ್ ಹಿನ್ನೆಲೆಯ ನಾಯಕನಿಂದ ಇಂತಹ ಮಾತುಗಳು ಬರಬಾರದು ಎಂದು ಪ್ರಶ್ನಿಸಿದರು. ಸಿ.ಟಿ. ರವಿ ಅವರು ಕೂಡಲೇ ಮುಲ್ಲಾ ಸಮಾಜದ ಕ್ಷಮೆ ಕೋರಬೇಕು. ರಾಜ್ಯ ಸರ್ಕಾರ ಮತ್ತು ಗೃಹ ಇಲಾಖೆ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಮುಸ್ಲಿಂ ಸಮುದಾಯವು ದೇಶದ ಆಡಳಿತ, ನ್ಯಾಯಾಂಗ, ಶಿಕ್ಷಣ, ಕಲೆ, ಕ್ರೀಡೆ ಹಾಗೂ ವಿಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಹತ್ವದ ಕೊಡುಗೆ ನೀಡಿದೆ. ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಹಾಗೂ ಡಾ. ಜಾಕಿರ್ ಹುಸೇನ್ ಅವರಂತಹ ಮಹನೀಯರು ರಾಷ್ಟ್ರಪತಿಗಳಾಗಿ ದೇಶಕ್ಕೆ ಸೇವೆ ಸಲ್ಲಿಸಿರುವುದನ್ನು ಯಾರೂ ಮರೆಯಬಾರದು ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಶಮಶರಲಿ ಮುಲ್ಲಾ, ಶಹಜಾನ ಮುಲ್ಲಾ, ಮುಸ್ತಾಕ್ ಮುಲ್ಲಾ, ರಿಜ್ವಾನ್ ಮುಲ್ಲಾ ಹಾಗೂ ಎಂ.ಎಂ. ಮುಲ್ಲಾ ಸೇರಿದಂತೆ ಅಸೋಸಿಯೇಷನ್ನ ಪದಾಧಿಕಾರಿಗಳು ಉಪಸ್ಥಿತರಿದ್ದರು.
