ಕಾಗವಾಡ ತಾಲೂಕಿನ ಕಾತ್ರಾಳ ಗ್ರಾಮದ ಐನಾಪೂರ ಹದ್ದಿಯಲ್ಲಿ ಹಲವು ವರ್ಷಗಳಿಂದ ಬಳಕೆಯಲ್ಲಿದ್ದ ರಸ್ತೆಯನ್ನು ಬಂದ್ ಮಾಡಲಾಗಿದ್ದು, ತಕ್ಷಣವೇ ರಸ್ತೆ ಮರುಬಳಕೆಗೆ ಅನುವು ಮಾಡಿಕೊಡಬೇಕೆಂದು ಆಗ್ರಹಿಸಿ ಸ್ಥಳೀಯ 10 ಕುಟುಂಬಗಳ ನಿವಾಸಿಗಳು ಕಾಗವಾಡ ತಹಶೀಲ್ದಾರ್ ರವೀಂದ್ರ ಹಾದಿಮನಿ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಮನವಿ ಸಲ್ಲಿಸಿ ಮಾತನಾಡಿದ ನ್ಯಾಯವಾದಿ ಬಾಳಾಸಾಹೇಬ ರಾವ್, “ಐನಾಪೂರ ಹದ್ದಿನ ರಿಸರ್ವೆ ಸರ್ವೆ ನಂಬರ್ 765, ಕ್ಷೇತ್ರ ಎಕರೆ 17-34 ಗುಂಟೆ ಜಮೀನಿನಲ್ಲಿ ಪಶ್ಚಿಮಕ್ಕೆ ದಕ್ಷಿಣೋತ್ತರವಾಗಿ ರಸ್ತೆ ಇದ್ದು, ಅದನ್ನು ಸ್ಥಳೀಯರು ಹಾಗೂ ಅವರ ಪೂರ್ವಜರು ಸುಮಾರು 70-80 ವರ್ಷಗಳಿಂದ ಬಳಸುತ್ತಾ ಬಂದಿದ್ದಾರೆ. ಪ್ರಸ್ತುತವೂ ಚಾಲ್ತಿಯಲ್ಲಿರುವ ಈ ರಸ್ತೆಯನ್ನೇ ನಂಬಿ ಸುಮಾರು 9-10 ಕುಟುಂಬಗಳು ಮನೆಗಳನ್ನು ನಿರ್ಮಿಸಿಕೊಂಡಿದ್ದು, 80ಕ್ಕೂ ಹೆಚ್ಚು ದನಕರುಗಳನ್ನು ಸಾಕುತ್ತಿವೆ. ಕುಡಿಯುವ ನೀರು, ದನಕರುಗಳಿಗೆ ಮೇವು, ಶಾಲಾ ಮಕ್ಕಳ ಸಂಚಾರ, ಕೃಷಿ ಸಾಮಗ್ರಿಗಳ ಪೂರೈಕೆ ಹಾಗೂ ಬಿತ್ತನೆ ಕಾರ್ಯಗಳಿಗೆ ಈ ಒಂದೇ ರಸ್ತೆಯನ್ನು ಅವಲಂಬಿಸಿದ್ದು, ಇದನ್ನು ಬಿಟ್ಟರೆ ಬೇರೆ ಯಾವುದೇ ಪರ್ಯಾಯ ರಸ್ತೆ ಇರುವುದಿಲ್ಲ. ಹೀಗಿದ್ದಾಗ, ಸದರಿ ಸರ್ವೆ ನಂಬರ್ ಮಾಲೀಕರಾದ ಅಶೋಕ ರಾಮಚಂದ್ರ ಮಾವಲಿ ಎಂಬುವವರು ಸಂಚಾರಕ್ಕೆ ತಕರಾರು ಮಾಡುತ್ತಿದ್ದು, ಇದರಿಂದ ಸುಮಾರು 60-70 ಎಕರೆ ಜಮೀನಿನಲ್ಲಿ ಕೃಷಿ ಚಟುವಟಿಕೆ ನಡೆಸಲು ಮತ್ತು ಬೆಳೆ ಸಾಗಾಟ ಮಾಡಲು ಸಾಧ್ಯವಾಗದೆ ರೈತರು ತೀವ್ರ ಆರ್ಥಿಕ ನಷ್ಟ ಹಾಗೂ ತೊಂದರೆಗೆ ಒಳಗಾಗಿದ್ದಾರೆ. ಆದ್ದರಿಂದ ಸಮಸ್ಯೆಯ ಗಂಭೀರತೆಯನ್ನು ಪರಿಗಣಿಸಿ ಜಮೀನಿಗೆ ತೆರಳಲು ರಸ್ತೆಯ ಅಡೆತಡೆ ತೆರವುಗೊಳಿಸಿ ತುರ್ತು ಕ್ರಮ ಜರುಗಿಸಬೇಕು” ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಶ್ರೀಕಾಂತ ನರೋಟ್ಟಿ, ಮಹಾವೀರ ನರೋಟ್ಟಿ, ಸದಾಶಿವ ನರೋಟ್ಟಿ, ಅಮೀನಸಾಬ ಮುಲ್ಲಾ, ಸರೀತಾ ಖಟಾಂವಿ, ತುಕಾರಾಮ ರಸಾಳ, ಲಕ್ಷ್ಮಣ ರಸಾಳ, ಅರವಿಂದ ನರೋಟ್ಟಿ, ಸುರೇಶ ನರೋಟ್ಟಿ, ಸಂಗಪ್ಪಾ ಹುಬ್ಬಳ್ಳಿ, ವರುಣ ಯರಂಡೋಲಿ, ಮೈಸೂರು ಕುಡಚಿ, ರಾವಬಹದ್ದೂರ ಕುಡಚಿ, ಭರತೇಶ ಯರಂಡೋಲಿ, ನಿಂಗಪ್ಪಾ ಖಟಾಂವಿ, ಪರಶುರಾಮ ಖಟಾಂವಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
