ಸಾಂಗ್ಲಿ ಜಿಲ್ಲೆಯ ಕುಪ್ವಾಡದಲ್ಲಿ ಭೀಕರವಾಗಿ ಹತ್ಯೆಗೊಳಗಾದ ಖಾನಾಪುರ ತಾಲೂಕಿನ ಹೆಬ್ಬಾಳ ಗ್ರಾಮದ ಮೋಹನ್ ಕೇಸರೇಕರ್ ಹಾಗೂ ಅವರ ಪತ್ನಿ ನಿಶಾ ಕೇಸರೇಕರ್ ದಂಪತಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕ್ರೋಶ ತೀವ್ರಗೊಂಡಿದೆ. ಆರೋಪಿಗೆ ಗಲ್ಲಿಗೇರಿಸುವಂತೆ ಆಗ್ರಹಿಸಿ ಹಾಗೂ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಕೊಡಿಸಲು ಆಗಸ್ಟ್ 21ರಂದು ಬೆಳಗಾವಿಯಲ್ಲಿ ಬೃಹತ್ ಮೌನ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.

ಈ ಕುರಿತಾದ ಮನವಿಯನ್ನು ನಗರ ಪೊಲೀಸ್ ಆಯುಕ್ತರಿಗೆ ಸಲ್ಲಿಸಲಾಯಿತು. ಶ್ರೀರಾಮ ಸೇನಾ ಹಿಂದುಸ್ಥಾನ್ ಸಂಸ್ಥಾಪಕ ರಮಾಕಾಂತ್ ಕೊಂಡಸ್ಕರ್ ಅವರು ಹೆಬ್ಬಾಳ ಗ್ರಾಮದಲ್ಲಿರುವ ಮೃತ ದಂಪತಿಯ ಮನೆಗೆ ಭೇಟಿ ನೀಡಿ, ಅನಾಥರಾದ ಅವರ ಇಬ್ಬರು ಮಕ್ಕಳ ಸಾಂತ್ವನ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪೋಷಕರನ್ನು ಕಳೆದುಕೊಂಡು ಕಂಗಾಲಾಗಿರುವ ಮಕ್ಕಳ ಸಂಪೂರ್ಣ ಶಿಕ್ಷಣ ಹಾಗೂ ಭವಿಷ್ಯದ ಹೊಣೆಯನ್ನು ಮರಾಠ ಸಮಾಜವೇ ವಹಿಸಿಕೊಳ್ಳಲಿದೆ ಎಂದು ಭರವಸೆ ನೀಡಿದರು. ಅಲ್ಲದೆ, ಕೊಲೆಗಡುಕ ಫರೀದ್ ಅಬ್ದುಲ್ ಶೇಖ್ ಎಂಬಾತನಿಗೆ ಕಠಿಣ ಶಿಕ್ಷೆಯಾಗುವವರೆಗೆ ಹೋರಾಟ ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ದಂಪತಿಗೆ ನ್ಯಾಯ ಸಿಗಲು ಆಗಸ್ಟ್ 21ರ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಬೆಳಗಾವಿಯ ಸರ್ದಾರ್ ಹೈಸ್ಕೂಲ್ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಬೃಹತ್ ಮೂಕ ಮೆರವಣಿಗೆ ನಡೆಯಲಿದೆ. ಇದಾದ ಬಳಿಕ ರಮಾಕಾಂತ್ ಕೊಂಡಸ್ಕರ್ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳನ್ನು ಭೇಟಿಯಾಗಿ, ಈ ಪ್ರಕರಣವನ್ನು ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಕ್ಕೆ ವಹಿಸಿ ಆರೋಪಿಗೆ ಮರಣದಂಡನೆ ವಿಧಿಸುವಂತೆ ಮನವಿ ಮಾಡಲಿದ್ದಾರೆ.
