Belagavi

ಹಾವು ರೈತನ ಶತ್ರುವಲ್ಲ, ನೈಸರ್ಗಿಕ ಮಿತ್ರ

Share

ನಾಗಪಂಚಮಿ ಎನ್ನುವುದು ಕೇವಲ ಧಾರ್ಮಿಕ ಹಬ್ಬವಲ್ಲ, ಪ್ರಕೃತಿ ಮತ್ತು ಜೀವರಾಶಿಗೆ ಕೃತಜ್ಞತೆ ಸಲ್ಲಿಸುವ ದಿನವಾಗಿದೆ. ಹಾವುಗಳು ರೈತನ ಶತ್ರುಗಳಲ್ಲ, ಬದಲಿಗೆ ಬೆಳೆ ನಾಶಪಡಿಸುವ ಇಲಿಗಳನ್ನು ನಿಯಂತ್ರಿಸುವ ನೈಸರ್ಗಿಕ ಮಿತ್ರರು ಎಂದು ಸರ್ಪಮಿತ್ರ ಭರತೇಶ ಹೆಬ್ಬಾಜಿ ಅಭಿಪ್ರಾಯಪಟ್ಟಿದ್ದಾರೆ.

ಬೆಳಗಾವಿ ತಾಲೂಕಿನ ಹಲಗಾ ಗ್ರಾಮದ 25 ವರ್ಷದ ಭರತೇಶ ಹೆಬ್ಬಾಜಿ ಕಳೆದ ಮೂರು ವರ್ಷಗಳಿಂದ ಉರಗ ರಕ್ಷಣೆ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ವೃತ್ತಿಯಲ್ಲಿ ಟೈಲ್ಸ್ ಫಿಟ್ಟಿಂಗ್ ಕೆಲಸ ಮಾಡುವ ಇವರು, ಕೃಷಿ ಹಿನ್ನೆಲೆಯಿಂದ ಬಂದವರಾಗಿದ್ದರಿಂದ ಹೊಲಗದ್ದೆಗಳಲ್ಲಿ ಹಾವುಗಳ ನಡವಳಿಕೆಯನ್ನು ಹತ್ತಿರದಿಂದ ಕಂಡುಕೊಂಡಿದ್ದಾರೆ. ಮಳೆಗಾಲದಲ್ಲಿ ಬಿಲಗಳಿಗೆ ನೀರು ತುಂಬುವುದರಿಂದ ಹಾವುಗಳು ಮತ್ತು ಇಲಿಗಳು ಆಶ್ರಯ ಅರಸಿ ಹೊರಬರುತ್ತವೆ. ಈ ವೇಳೆ ಮಾನವ ಮತ್ತು ಹಾವಿನ ನಡುವಿನ ಸಂಘರ್ಷ ಹೆಚ್ಚುವ ಸಾಧ್ಯತೆಯಿರುತ್ತದೆ. ಆದರೆ ಇಲಿಗಳನ್ನು ಬೇಟೆಯಾಡುವ ಹಾವುಗಳು ನಿಜಕ್ಕೂ ರೈತರ ನೈಸರ್ಗಿಕ ಮಿತ್ರ ಎಂದು ಅವರು ವಿವರಿಸಿದರು.

ಹಾವುಗಳು ಹಾಲು ಕುಡಿಯುತ್ತವೆ, ಮಕುಟದ ನಾದಕ್ಕೆಣೆಯಾಗಿ ಕುಣಿಯುತ್ತವೆ, ಹಗೆ ತೀರಿಸಿಕೊಳ್ಳುತ್ತವೆ ಅಥವಾ ನಾಗಮಣಿ ಇರುತ್ತದೆ ಎಂಬುದೆಲ್ಲಾ ವೈಜ್ಞಾನಿಕ ಆಧಾರವಿಲ್ಲದ ಮೂಢನಂಬಿಕೆಗಳು ಎಂದು ಭರತೇಶ ಸ್ಪಷ್ಟಪಡಿಸಿದರು. ಹಾವಿನ ಕಡಿತಕ್ಕೊಳಗಾದರೆ ಮಂತ್ರ-ತಂತ್ರ ಅಥವಾ ಮಾಟಮಂತ್ರಗಳ ಮೊರೆ ಹೋಗದೆ ತಕ್ಷಣ ಆಸ್ಪತ್ರೆಗೆ ದಾಖಲಾಗಿ ‘ಆಂಟಿ-ವೆನಮ್’ ಚಿಕಿತ್ಸೆ ಪಡೆಯುವುದು ಅಗತ್ಯ ಎಂದರು. ನಾಗಪಂಚಮಿ ಹಿನ್ನೆಲೆಯಲ್ಲಿ ಹಾವು ಕಂಡ ತಕ್ಷಣ ಕೊಲ್ಲದೇ, ಸುರಕ್ಷಿತ ಅಂತರ ಕಾಯ್ದುಕೊಂಡು ತರಬೇತಿ ಪಡೆದ ಸರ್ಪಮಿತ್ರರನ್ನು ಅಥವಾ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.

Tags:

error: Content is protected !!