Belagavi

ಸಚಿವ ನಾಗೇಂದ್ರ ವಜಾಗೆ ಒತ್ತಾಯ: ಬೆಳಗಾವಿಯಲ್ಲಿ ಬಿಜೆಪಿ ಬೃಹತ್ ಅಹೋರಾತ್ರಿ ಧರಣಿ ಆರಂಭ!!!

Share

ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರ್ಬಳಕೆ ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಹೋರಾಟ ತೀವ್ರಗೊಳಿಸಿದೆ. ಬೆಳಗಾವಿಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.

ವಾಲ್ಮೀಕಿ ಅಭಿವೃದ್ಧಿ ನಿಗಮದ ಸುಮಾರು 187 ಕೋಟಿ ರೂಪಾಯಿ ಹಣ ಲೂಟಿಯಾಗಿದೆ ಎಂದು ಆರೋಪಿಸಿರುವ ಬಿಜೆಪಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಬಿ. ನಾಗೇಂದ್ರ ಅವರನ್ನು ತಕ್ಷಣವೇ ಸಚಿವ ಸಂಪುಟದಿಂದ ವಜಾಗೊಳಿಸಬೇಕೆಂದು ಉಗ್ರವಾಗಿ ಆಗ್ರಹಿಸಿ ಇಂದು ಬೆಳಗಾವಿಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.

ಬಿ. ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ, ಅವರು ಹುದ್ದೆಗೆ ರಾಜೀನಾಮೆ ನೀಡುವವರೆಗೂ ಅಹೋರಾತ್ರಿ ಹೋರಾಟ ಮುಂದುವರೆಯಲಿದೆ ಎಂದು ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ್ ಪಾಟೀಲ್ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಸ್ವಾತಂತ್ರ್ಯ ಬಂದ ನಂತರದಿಂದ ಇಂದಿನವರೆಗೆ ಇಷ್ಟೊಂದು ಭ್ರಷ್ಟ ಮತ್ತು ಕೀಳುಮಟ್ಟದ ಆಡಳಿತ ನೀಡಿದ ಸರ್ಕಾರವನ್ನು ನೋಡಿಲ್ಲ ಎಂದು ಕಿಡಿಕಾರಿದ ಅವರು, ನೂರಾರು ಕೋಟಿ ಲೂಟಿ ಮಾಡಿ ಜೈಲಿಗೆ ಹೋಗಿ ಬಂದವರ ಪ್ರಕರಣವನ್ನು ವಾಪಸ್ ಪಡೆಯಲು ಹೊರಟಿರುವ ಅತ್ಯಂತ ಭ್ರಷ್ಟ ಸರ್ಕಾರ ಇದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರಸ್ತುತ ಸರ್ಕಾರದ ತಪ್ಪುಗಳನ್ನು ಸಾರ್ವಜನಿಕರಿಗೆ ತಲುಪಿಸುವ ನಿಟ್ಟಿನಲ್ಲಿ ತಾವು ರಾತ್ರಿ ಕೂಡ ಇಲ್ಲೇ ಉಳಿದು ಹೋರಾಟ ನಡೆಸುವುದಾಗಿ ತಿಳಿಸಿದರು.

ಮಾಜಿ ಶಾಸಕ ಸಂಜಯ್ ಪಾಟೀಲ್ ಅವರು “ಕರ್ನಾಟಕದಲ್ಲಿ ‘ಭ್ರಷ್ಟಾಚಾರ ಏಕ್ ಪ್ರೇಮ್ ಕಹಾನಿ’ ಎಂಬ ಹೊಸ ಸಿನಿಮಾ ಬಿಡುಗಡೆಯಾಗಿದೆ. ಈ ಸಿನಿಮಾಗೆ ಸಿಎಂ ಡಿ.ಕೆ. ಶಿವಕುಮಾರ್ ಅವರು ಡೈರೆಕ್ಟರ್ ಮತ್ತು ಪ್ರೊಡ್ಯೂಸರ್ ಆಗಿದ್ದು, ಸಚಿವ ಬಿ. ನಾಗೇಂದ್ರ ಅವರನ್ನು ಹೊಸ ನಟನನ್ನಾಗಿ ತಗೊಂಡಿದ್ದಾರೆ. ಭ್ರಷ್ಟಾಚಾರದ ವೈಸ್ ಚಾನ್ಸಲರ್ ಆಗಿರುವ ಡಿಕೆಶಿ ಅವರು ನಾಗೇಂದ್ರ ಅವರೊಂದಿಗೆ ಸೇರಿ ಲೂಟಿ ಮಾಡುತ್ತಿದ್ದಾರೆ,” ಎಂದು ಗಂಭೀರ ಆರೋಪ ಮಾಡಿದರು. ದಿನೇಶ್ ಗುಂಡೂರಾವ್, ಹೆಚ್.ಕೆ. ಪಾಟೀಲ್, ಆರ್.ವಿ. ದೇಶಪಾಂಡೆ, ಹೆಚ್.ಸಿ. ಮಹದೇವಪ್ಪ ಅವರಂತಹ ಹಿರಿಯ ನಾಯಕರನ್ನು ಬಿಟ್ಟು ನಾಗೇಂದ್ರ ಅವರಿಗೆ ಮಂತ್ರಿ ಸ್ಥಾನ ಏಕೆ ನೀಡಲಾಗಿದೆ ಎಂದು ಪ್ರಶ್ನಿಸಿದ ಅವರು, ನಾಗೇಂದ್ರ ಅವರು ರಾಜೀನಾಮೆ ನೀಡದಿದ್ದರೆ ಬಿಜೆಪಿ ಬೀದಿ ಹೋರಾಟ ಹಾಗೂ ಸದನದಲ್ಲಿ ತೀವ್ರ ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಸಿದರು.

ಆರ್. ಅಶೋಕ್ ಅವರ ನೇತೃತ್ವದಲ್ಲಿ ಇಡೀ ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿ ಅಹೋರಾತ್ರಿ ಹೋರಾಟವನ್ನು ಆರಂಭಿಸಲಾಗಿದೆ ಎಂದು ಮಾಜಿ ಶಾಸಕ ಅನಿಲ ಬೆನಕೆ ಹೇಳಿದ್ದಾರೆ. 2024ರಲ್ಲಿ ಮಂತ್ರಿಯಾದ ಬಿ. ನಾಗೇಂದ್ರ ಅವರು ವಾಲ್ಮೀಕಿ ಸಮುದಾಯದ ದಲಿತರ 187 ಕೋಟಿ ರೂಪಾಯಿ ಹಣವನ್ನು ಹಗರಣ ಮಾಡಿದ್ದಾರೆ. ಈ ಹಣವನ್ನು ಎಲೆಕ್ಷನ್‌ಗೆ ಹಾಗೂ ಲ್ಯಾಂಬೋರ್ಗಿನಿಯಂತಹ ಐಷಾರಾಮಿ ಕಾರುಗಳ ಖರೀದಿಗೆ ಬಳಸಲಾಗಿದೆ. ಹಿಂದುಳಿದ ವರ್ಗದ ಜನರ ನಿಗಮದ ಹಣವನ್ನು ದುರುಪಯೋಗಪಡಿಸಿಕೊಂಡಿರುವ ಈ ಮಲೇಶಿಯಾ ಮಾದರಿಯ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದರು.

ಮಾಜಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಮಾಜಿ ಸಚಿವ ಬಿ. ನಾಗೇಂದ್ರ ಅವರ ಮೇಲೆ ಭ್ರಷ್ಟಾಚಾರದ ಆರೋಪಗಳಿದ್ದರೂ ಮತ್ತೆ ಮಂತ್ರಿ ಸ್ಥಾನ ನೀಡಲಾಗಿದೆ ಎಂದು ಕಿಡಿಕಾರಿದ ಅವರು, ಇಂತಹ ಭ್ರಷ್ಟಾಚಾರದಲ್ಲಿ ಭಾಗಿಯಾದವರು ಸಂಪುಟದಲ್ಲಿ ಇರಬಾರದು ಎಂಬುದೇ ನಮ್ಮ ಈ ಹೋರಾಟದ ಮುಖ್ಯ ಉದ್ದೇಶವಾಗಿದೆ. ಇದರ ಜೊತೆಗೆ ಅಂಗವಿಕಲರ ಮಾಸಾಶನ ವಿಳಂಬ ಹಾಗೂ ಬರ ಪರಿಹಾರ ಘೋಷಣೆ ಮತ್ತು ಬೆಳೆ ನಷ್ಟ ಪರಿಹಾರ ವಿತರಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದ ಅವರು, ಭ್ರಷ್ಟ ಕಾಂಗ್ರೆಸ್ ಸರ್ಕಾರ ತೊಲಗಬೇಕು ಮತ್ತು ಬಿ. ನಾಗೇಂದ್ರ ಅವರ ರಾಜೀನಾಮೆ ಪಡೆಯಲೇಬೇಕು ಎಂದು ತೀವ್ರವಾಗಿ ಆಗ್ರಹಿಸಿದರು.

ಒಬಿಸಿ ಘಟಕದ ಅಧ್ಯಕ್ಷ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರದ ಸಾಲು ಸಾಲು ಹಗರಣಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಮಾಜಿ ಸಚಿವ ಬಿ. ನಾಗೇಂದ್ರ ಹಾಗೂ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಮೇಲೆ ತೀವ್ರ ಭ್ರಷ್ಟಾಚಾರದ ಆರೋಪಗಳಿದ್ದರೂ ಸರ್ಕಾರ ಅವರನ್ನು ರಕ್ಷಿಸಲು ಮುಂದಾಗಿದೆ ಎಂದು ಕಿಡಿಕಾರಿದ ಅವರು, ಇಬ್ಬರೂ ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಮಹೇಶ್ ಕುಮಟಳ್ಳಿ ಸೇರಿದಂತೆ ಪ್ರಮುಖ ಬಿಜೆಪಿ ನಾಯಕರು ಈ ಸುದೀರ್ಘ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.

Tags:

error: Content is protected !!