MAHARASHTRA

ಪ್ರತಾಪಗಡ ಕೋಟೆಯಲ್ಲಿ ಗಡಿ ವಿವಾದ ಜಾಗೃತಿ: ತುಳಜಾಭವಾನಿಗೆ ಪೂಜೆ

Share

ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಮಹಾರಾಷ್ಟ್ರದ ಪ್ರತಾಪಗಡ ಕೋಟೆಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಮ್.ಇ.ಎಸ್) ಪುಣೆ ವಿಭಾಗದ ವತಿಯಿಂದ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಜಾಗೃತಿ ಅಭಿಯಾನ ನಡೆಸಲಾಗಿದೆ. ಕೋಟೆಗೆ ಆಗಮಿಸಿದ್ದ ಪ್ರವಾಸಿಗರಿಗೆ ಗಡಿಭಾಗದ ಪರಿಸ್ಥಿತಿಯ ಕುರಿತು ಮಾಹಿತಿ ನೀಡಿ ಬೆಂಬಲ ಕೋರಲಾಯಿತು.

ಎಮ್.ಇ.ಎಸ್ ಪುಣೆ ವಿಭಾಗದ ವಿಶ್ವನಾಥ ಪಾಖರೆ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ, ಕೋಟೆಯಲ್ಲಿರುವ ತುಳಜಾಭವಾನಿ ದೇವಾಲಯಕ್ಕೆ ತೆರಳಿ ಗಡಿ ವಿವಾದ ಬಗೆಹರಿಯಲಿ ಎಂದು ವಿಶೇಷ ಪೂಜೆ ಮತ್ತು ಆರತಿ ಸಲ್ಲಿಸಲಾಯಿತು. ರಜೆಯ ದಿನವಾಗಿದ್ದರಿಂದ ಕೋಟೆಯಲ್ಲಿದ್ದ ಮಹಾರಾಷ್ಟ್ರದ ವಿವಿಧ ಭಾಗಗಳ ಪ್ರವಾಸಿಗರನ್ನು ಉದ್ದೇಶಿಸಿ ಮಾತನಾಡಿದ ನಾಯಕರು, 1956ರ ಭಾಷಾವಾರು ಪ್ರಾಂತ ರಚನೆ ವೇಳೆ ಗಡಿ ಕನ್ನಡಿಗರಿಗೆ ಹಾಗೂ ಮರಾಠಿಗರಿಗೆ ಆಗಿರುವ ವಿಷಯಗಳು ಮತ್ತು ಕರ್ನಾಟಕ ಸರ್ಕಾರದ ವಿರುದ್ಧ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ‘ಸಂಯುಕ್ತ ಮಹಾರಾಷ್ಟ್ರ ಜಾಲಚ್ ಪೈಜೆ’ ಸೇರಿದಂತೆ ವಿವಿಧ ಘೋಷಣೆಗಳನ್ನು ಕೂಗಲಾಯಿತು. ಆರ್.ಪಿ.ಐ (ಅಠಾವಳೆ) ವೈ ತಾಲೂಕು ಅಧ್ಯಕ್ಷ ಪ್ರತಾಪ್ ಜಾಧವ್ ಹಾಗೂ 1986ರ ಕನ್ನಡ ಸಕ್ತಿ ಚಳವಳಿಯಲ್ಲಿ ಪಾಲ್ಗೊಂಡಿದ್ದ 80 ವರ್ಷದ ಮನೋಹರ್ ತ್ರಿಂಬಕ್ ಪಟವರ್ಧನ್ ಅವರನ್ನು ಎಮ್.ಇ.ಎಸ್ ನಾಯಕರು ಭೇಟಿಯಾದರು. ಈ ಕಾರ್ಯಕ್ರಮದಲ್ಲಿ ಅಜಿತ್ ಕುಮಟೇಕರ್, ರಾಮದಾಸ್ ಪಾಖರೆ, ಪಂಕಜ್ ದಾಸ್ ಸೇರಿದಂತೆ ಹಲವು ಕಾರ್ಯಕರ್ತರು ಭಾಗವಹಿಸಿದ್ದರು.

Tags:

error: Content is protected !!