ರಾಜ್ಯದಲ್ಲಿ ಮುಂಗಾರು ಮಳೆ ಚುರುಕುಗೊಂಡಿದ್ದು, ಗೋವಾ-ಕರ್ನಾಟಕ ಗಡಿಯಲ್ಲಿರುವ ವಿಶ್ವಪ್ರಸಿದ್ಧ ದೂಧ್‌ಸಾಗರ ಜಲಪಾತ ಹೊಸ ಕಳೆ ಪಡೆದುಕೊಂಡಿದೆ. ಆಕಾಶದಿಂದ ಹಾಲಿನ ಹೊಳೆಯೇ ಧುಮ್ಮಿಕ್ಕುತ್ತಿದೆಯೇನೋ ಎಂಬಂತೆ ಭಾಸವಾಗುತ್ತಿರುವ ಈ ನಯನಮನೋಹರ ದೃಶ್ಯದ ಸಂಪೂರ್ಣ ವರದಿ ಇಲ್ಲಿದೆ.


ಮಾಂಡೋವಿ ನದಿಯ ಅಬ್ಬರಕ್ಕೆ ಗೋವಾ ಹಾಗೂ ಕರ್ನಾಟಕದ ಗಡಿಯಲ್ಲಿ ಪ್ರಕೃತಿಯ ಅದ್ಭುತ ರೂಪವೊಂದು ಸೃಷ್ಟಿಯಾಗಿದೆ. ಹಸಿರು ಕಾನನದ ಮಧ್ಯೆ ಸುಮಾರು 310 ಮೀಟರ್ ಎತ್ತರದಿಂದ ಭೋರ್ಗರೆಯುತ್ತಾ ಧುಮ್ಮಿಕ್ಕುತ್ತಿರುವ ದೂಧ್‌ಸಾಗರ ಜಲಪಾತ, ಸದ್ಯ ಪ್ರಕೃತಿ ಪ್ರೇಮಿಗಳ ಕಣ್ಮನ ಸೆಳೆಯುತ್ತಿದೆ. ಕ್ಯಾಸಲ್ ರಾಕ್‌ನಿಂದ ಭೀಕರ ಕಲ್ಲುಬಂಡೆಗಳು ಹಾಗೂ 9 ಸುರಂಗ ಮಾರ್ಗಗಳನ್ನು ದಾಟಿ ಬಂದರೆ ಸಿಗುವ ಈ ಭೂಲೋಕದ ಸ್ವರ್ಗ, ಸದ್ಯ ಹಾಲ್ನೊರೆಯ ವೈಭವವನ್ನು ಮೈತುಂಬಿಕೊಂಡು ಪ್ರಕೃತಿಯ ರುದ್ರರಮಣೀಯ ರೂಪಕ್ಕೆ ಸಾಕ್ಷಿಯಾಗಿದೆ.

ಬೆಳಗಾವಿ, ಗೋವಾ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಸಂಗಮ ಸ್ಥಾನದಲ್ಲಿರುವ ಈ ವಿಶ್ವಪ್ರಸಿದ್ಧ ಪ್ರವಾಸಿ ತಾಣ ಸದ್ಯ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತಿದ್ದರೂ, ಕಣ್ತುಂಬಿಕೊಳ್ಳಲು ಜನರಿಲ್ಲದೆ ಬಿಕೋ ಎನ್ನುತ್ತಿದೆ. ಕಳೆದ ಮೂರು ವರ್ಷಗಳಿಂದ ಈ ಜಲಪಾತದ ವೀಕ್ಷಣೆಗೆ ಪ್ರವಾಸಿಗರಿಗೆ ಸಂಪೂರ್ಣವಾಗಿ ನಿರ್ಬಂಧ ಹೇರಲಾಗಿದೆ. ಈ ಹಿಂದೆ ಪ್ರವಾಸಿಗರು ಟ್ರ್ಯಾಕ್ ಮೇಲೆ ನಡೆಸುತ್ತಿದ್ದ ಹುಚ್ಚಾಟ ಹಾಗೂ ಸುರಕ್ಷತೆಯ ಕಾರಣಗಳನ್ನು ಮುಂದಿಟ್ಟುಕೊಂಡು ರೈಲ್ವೆ ಇಲಾಖೆಯು ವಿಧಿಸಿರುವ ಈ ಬ್ರೇಕ್ ಇಂದಿಗೂ ಮುಂದುವರಿದಿದೆ.
ಇದೀಗ ಜಲಪಾತ ಕೈಬೀಸಿ ಕರೆಯುತ್ತಿದ್ದರೂ, ಕಣ್ತುಂಬಿಕೊಳ್ಳಲಾಗದ ಪರಿಸ್ಥಿತಿ ಇರುವುದರಿಂದ ಸಾರ್ವಜನಿಕರು ಹಾಗೂ ಪ್ರವಾಸಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜಲಪಾತಕ್ಕೆ ವಿಧಿಸಲಾಗಿರುವ ನಿರ್ಬಂಧವನ್ನು ಸಂಪೂರ್ಣವಾಗಿ ತೆಗೆಯುವ ಬದಲು, ಸುರಕ್ಷಿತ ಪ್ರವಾಸಕ್ಕೆ ಬೇಕಾದ ಹೊಸ ನಿಯಮಾವಳಿಗಳನ್ನು ಜಾರಿಗೊಳಿಸಬೇಕು. ಕಟ್ಟುನಿಟ್ಟಿನ ನಿಯಮಗಳೊಂದಿಗೆ ಪ್ರವಾಸಿಗರಿಗೆ ವೀಕ್ಷಣೆಗೆ ಮುಕ್ತ ಅವಕಾಶ ನೀಡಬೇಕು ಎಂದು ಪ್ರವಾಸಿ ಪ್ರೇಮಿಗಳು ಸರ್ಕಾರ ಹಾಗೂ ರೈಲ್ವೆ ಇಲಾಖೆಗೆ ತೀವ್ರ ಆಗ್ರಹ ಕೇಳಿಬರುತ್ತಿದೆ.
