ಕಳೆದ ವರ್ಷ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ವಿದ್ಯುತ್ ತಂತಿ ತಗುಲಿ ಯುವಕ ಮೃತಪಟ್ಟಿದ್ದರೂ, ನಗರದ ವಿವಿಧೆಡೆ ವಿದ್ಯುತ್ ತಂತಿಗಳ ದುರಸ್ತಿ ಕಾರ್ಯ ಸಮರ್ಪಕವಾಗಿ ನಡೆದಿಲ್ಲ ಎಂದು ಆರೋಪಿಸಿ ಬಿಜೆಪಿ ಮುಖಂಡರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. 2025ರ ಸೆಪ್ಟೆಂಬರ್ 2ರಂದು ಏಳು ದಿನಗಳ ಗಣೇಶ ವಿಸರ್ಜನಾ ಕಾರ್ಯಕ್ರಮದ ಸಂದರ್ಭದಲ್ಲಿ ಢೋಬಳೆ ಗಲ್ಲಿಯ ಗಣೇಶ ಮಂಡಳಿಯ ವಿಸರ್ಜನಾ ಮೆರವಣಿಗೆ ಗಾಂಧಿ ವೃತ್ತದ ಬಳಿ ಸಾಗುತ್ತಿದ್ದಾಗ ವಿದ್ಯುತ್ ತಂತಿ ತಗುಲಿ ಶುಭಂ (ಶಿವಾಜಿ) ಸಂಕಪಾಳ ಎಂಬ ಯುವಕ ಮೃತಪಟ್ಟಿದ್ದನು.

ಘಟನೆ ನಡೆದು ಸುಮಾರು ಒಂದು ವರ್ಷ ಕಳೆದರೂ ಗಾಂಧಿ ವೃತ್ತದಿಂದ ಸರಾಫ್ ಬಜಾರ್‌ಗೆ ತೆರಳುವ ರಸ್ತೆಯೂ ಸೇರಿದಂತೆ ನಗರದ ಹಲವು ಪ್ರದೇಶಗಳಲ್ಲಿನ ವಿದ್ಯುತ್ ತಂತಿಗಳನ್ನು ಸಮರ್ಪಕವಾಗಿ ದುರಸ್ತಿ ಮಾಡಿಲ್ಲ ಎಂದು ಮುಖಂಡರು ದೂರಿದರು. ಮುಂಬರುವ ಗಣೇಶೋತ್ಸವದ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅವಘಡ ಸಂಭವಿಸದಂತೆ ಅಪಾಯಕಾರಿ ವಿದ್ಯುತ್ ತಂತಿಗಳನ್ನು ತಕ್ಷಣ ದುರಸ್ತಿ ಮಾಡಬೇಕು ಎಂದು ಆಗ್ರಹಿಸಿದರು. ಈ ಕುರಿತು ವಿಜಯಪುರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ನಗರಸಭೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪರಶುರಾಮ ರಜಪೂತ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಸಂದೀಪ ಪಾಟೀಲ ಝಳಕಿ, ಸಿದ್ದೇಶ್ವರ ಬ್ಯಾಂಕ್ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
