Vijaypura

ನಿವೃತ್ತ ಶಿಕ್ಷಕರ ಭೀಕರ ಹತ್ಯೆ; ಮಗಳ ಅಕ್ರಮ ಸಂಬಂಧಕ್ಕ ಅಡ್ಡಿಯಾಗಿದ್ದೇ ಕೊಲೆಗೆ ಕಾರಣ?ಪುತ್ರಿ ಸೇರಿ ಮೂವರ ವಿರುದ್ಧ ಆರೋಪ

Share

ವಿಜಯಪುರ ಜಿಲ್ಲೆಯಲ್ಲಿ ನಿವೃತ್ತ ಶಿಕ್ಷಕರೊಬ್ಬರ ಭೀಕರ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ಅಕ್ರಮ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿದ್ದೇ ಕೊಲೆಗೆ ಕಾರಣವಾಯಿತೇ ಎಂಬ ಅನುಮಾನ ಮೂಡಿದೆ. ತಲೆ ಹಾಗೂ ಎದೆಗೆ ಮಾರಣಾಂತಿಕ ವಾಗಿ ಹೊಡೆದು ಕೊಲೆ ಮಾಡಿದ ಬಳಿಕ, ಮೃತದೇಹವನ್ನು ಬೆಡ್‌ಶೀಟ್‌ನಲ್ಲಿ ಸುತ್ತಿ ರಸ್ತೆಬದಿಯಲ್ಲಿ ಎಸೆದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಪುತ್ರಿ ಸೇರಿ ಮೂವರ ವಿರುದ್ಧ ಆರೋಪ ಕೇಳಿಬಂದಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಅಷ್ಟಕ್ಕೂ ನಿವೃತ್ತ ಶಿಕ್ಷಕರ ಕೊಲೆಗೆ ಕಾರಣವೇನು? ಇಲ್ಲಿದೆ ಸಂಪೂರ್ಣ ವರದಿ.

ನಿವೃತ್ತ ಶಿಕ್ಷಕ… ಕುಟುಂಬದವರೊಂದಿಗೆ ಜಗಳ… ಅಕ್ರಮ ಸಂಬಂಧಕ್ಕೆ ವಿರೋಧ… ಕೊನೆಗೆ ನಿಗೂಢವಾಗಿ ಕೊಲೆಯಾದ ತಂದೆ… ಹೌದು, ಇಂತಹ ಹಲವು ಅನುಮಾನ ಗಳಿಗೆ ಕಾರಣವಾಗಿದೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಚವಡಿಹಾಳ ರಸ್ತೆಯ ಪೂಜಾರಿ ವಸ್ತಿ ಬಳಿಯಲ್ಲಿ ನಡೆದಿರುವ ಈ ಭೀಕರ ಹತ್ಯೆ.
ಮೃತರನ್ನು ಸಿದ್ದಪ್ಪ ಬಸಪ್ಪ ಅಂಜುಟಗಿ, 62 ಎಂದು ಗುರುತಿಸಲಾಗಿದೆ. ಶಿಕ್ಷಕರಾಗಿ ಸೇವೆ ಸಲ್ಲಿಸಿ ಸುಮಾರು ಎರಡು ವರ್ಷಗಳ ಹಿಂದೆ ನಿವೃತ್ತರಾಗಿದ್ದ ಸಿದ್ದಪ್ಪ ಅವರು, ಆಗಸ್ಟ್ 16ರಂದು ರಸ್ತೆಬದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಸಿದ್ದಪ್ಪ ಅವರ ಪುತ್ರಿ ಪ್ರಿಯಾಂಕಾ ಅವರ ಪತಿ ಸುರೇಶ ಮಸಳಿ ಕೊರೋನಾ ಅವಧಿಯಲ್ಲಿ ಮೃತಪಟ್ಟಿದ್ದರು. ಬಳಿಕ ಪ್ರಿಯಾಂಕಾ ಅವರು ವಿಜಯಪುರದ ಭೀಮಾಜಿ ಅಲಿಯಾಸ್ ಸಂತೋಷ ಗಣಪತಿ ಸಿಂಧೆ ಎಂಬಾತನೊಂದಿಗೆ ಸಂಬಂಧ ಹೊಂದಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಸಂಬಂಧಕ್ಕೆ ಸಿದ್ದಪ್ಪ ವಿರೋಧ ವ್ಯಕ್ತಪಡಿಸಿ ಪುತ್ರಿಗೆ ಬುದ್ಧಿವಾದ ಹೇಳುತ್ತಿದ್ದರು ಎನ್ನಲಾಗಿದೆ. ಇದೇ ವಿಚಾರವಾಗಿ ತಂದೆ-ಮಗಳ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದರ ಜೊತೆಗೆ, ನಿವೃತ್ತಿ ಹಣವನ್ನು ಬೇರೆಯವರಿಗೆ ನೀಡುತ್ತಾರೆ, ನಮಗೆ ಏನೂ ಕೊಡುವುದಿಲ್ಲ ಎಂಬ ವಿಚಾರವಾಗಿಯೂ ಕುಟುಂಬದಲ್ಲಿ ಮನಸ್ತಾಪವಿತ್ತು ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಆಗಸ್ಟ್ 16ರಂದು ಪರಿಚಯಸ್ಥ ರೊಬ್ಬರು ಸಿದ್ದಪ್ಪ ಅವರ ಮೊಬೈಲ್‌ನಿಂದ ಪುತ್ರಿ ನಿಖಿತಾಗೆ ಕರೆ ಮಾಡಿ, ಇಂಡಿ–ಚವಡಿಹಾಳ ರಸ್ತೆಯ ಪೂಜಾರಿ ವಸ್ತಿ ಸಮೀಪದ ಜಮೀನಿನ ಬಳಿ ಸಿದ್ದಪ್ಪ ಅವರ ಮೃತದೇಹ ಬಿದ್ದಿರುವುದಾಗಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ತೆರಳಿ ನೋಡಿದಾಗ ಸಿದ್ದಪ್ಪ ಅವರ ತಲೆ ಹಾಗೂ ಎದೆ ಭಾಗದಲ್ಲಿ ಗಂಭೀರ ರಕ್ತಗಾಯಗಳಾಗಿರುವುದು ಕಂಡುಬಂದಿದೆ. ಮೃತದೇಹದ ಸಮೀಪ ಮನೆಯ ಬೆಡ್‌ಶೀಟ್ ಹಾಗೂ ತಲೆದಿಂಬಿನ ಕವರ್ ಕೂಡ ಪತ್ತೆಯಾಗಿವೆ. ಆಗಸ್ಟ್ 15ರ ರಾತ್ರಿ 11 ಗಂಟೆಯಿಂದ 16ರ ಬೆಳಗ್ಗೆ 6 ಗಂಟೆಯ ನಡುವಿನ ಅವಧಿಯಲ್ಲಿ ಕೊಲೆ ನಡೆದಿರಬಹುದು ಎಂದು ದೂರಿನಲ್ಲಿ ಶಂಕಿಸಲಾಗಿದೆ.
ಪುತ್ರಿ ಪ್ರಿಯಾಂಕಾ, ಭೀಮಾಜಿ ಅಲಿಯಾಸ್ ಸಂತೋಷ ಹಾಗೂ ಮತ್ತೊಬ್ಬರು ಸೇರಿಕೊಂಡು ಸಂಚು ರೂಪಿಸಿ ಸಿದ್ದಪ್ಪ ಅವರನ್ನು ಕೊಲೆ ಮಾಡಿದ್ದಾರೆ. ಬಳಿಕ ಮೃತದೇಹವನ್ನು ಬೆಡ್‌ಶೀಟ್‌ನಲ್ಲಿ ಸುತ್ತಿ ವಾಹನದಲ್ಲಿ ಸಾಗಿಸಿ ರಸ್ತೆಬದಿಗೆ ಎಸೆದು ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಒಟ್ನಲ್ಲಿ ಒಬ್ಬ ನಿವೃತ್ತ ಶಿಕ್ಷಕನ ಭೀಕರ ಹತ್ಯೆ… ರಸ್ತೆಬದಿಯಲ್ಲಿ ಬೆಡ್‌ಶೀಟ್‌ನಲ್ಲಿ ಸುತ್ತಿದ ಶವ… ಕುಟುಂಬ ದೊಳಗಿನ ಮನಸ್ತಾಪ ಹಾಗೂ ಅಕ್ರಮ ಸಂಬಂಧದ ಆರೋಪ…
ಈ ಎಲ್ಲಾ ಅಂಶಗಳು ಪ್ರಕರಣಕ್ಕೆ ಹಲವು ಆಯಾಮಗಳನ್ನು ನೀಡಿವೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು, ಆರೋಪಗಳ ಸತ್ಯಾಸತ್ಯತೆ, ಕೊಲೆಯ ನೈಜ ಕಾರಣ ಹಾಗೂ ಕೃತ್ಯದಲ್ಲಿ ಇತರರ ಪಾತ್ರದ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.

ವಿಜಯಕುಮಾರ ಸಾರವಾಡ,
ಇನ್ ನ್ಯೂಜ್,
ವಿಜಯಪುರ.

Tags:

error: Content is protected !!