ಧಾರವಾಡದ ಸತ್ತೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 80ನೇ ಸ್ವಾತಂತ್ರ್ಯೋತ್ಸವ ಸಂಭ್ರಮ ಮನೆ ಮಾಡಿತ್ತು. ಶಾಲೆಯ ಆವರಣದಲ್ಲಿ ಬಿಜೆಪಿ ಮುಖಂಡರು 80ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ, ಸ್ವಾತಂತ್ರ್ಯಕ್ಕಾಗಿ ಮಡಿದ ಮಹನೀಯರ ಕುರಿತು ಮಾತನಾಡಿದರು.


ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬಿಜೆಪಿ ಗ್ರಾಮೀಣ ಕ್ಷೇತ್ರದ ಮುಖಂಡರಾದ ಮಂಜುನಾಥ ಮಕ್ಕಳಗೇರಿ ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿ, “ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ದೇಶದ ಮಹಾನ್ ಕ್ರಾಂತಿಕಾರಿಗಳು ಮಾಡಿದ ತ್ಯಾಗ ಮತ್ತು ಬಲಿದಾನಗಳನ್ನು ಇಂದಿನ ಯುವ ಪೀಳಿಗೆ ಎಂದಿಗೂ ಮರೆಯಬಾರದು. ಪ್ರತಿಯೊಬ್ಬರೂ ದೇಶಪ್ರೇಮ ಬೆಳೆಸಿಕೊಂಡು, ಭಾರತವನ್ನು ಮತ್ತೊಮ್ಮೆ ವಿಶ್ವಗುರುವನ್ನಾಗಿ ಮಾಡಲು ಶ್ರಮಿಸಬೇಕು. ಇಂದು ನಮಗೆ ಸ್ವಾತಂತ್ರ್ಯದ ಸಂಭ್ರಮ ಸಿಗುವುದಕ್ಕೆ ಮಹಾತ್ಮರುಗಳ ಬಲಿದಾನವನ್ನು ನೆನೆಯಬೇಕು. ಪ್ರತಿಯೊಬ್ಬರ ಮೇಲೆಯೂ ದೇಶದ ಭವಿಷ್ಯವಿದೆ. ದೇಶ ನಮಗೇನು ಕೊಟ್ಟಿದೆ ಎನ್ನುವುದಕ್ಕಿಂತ, ನಾವು ದೇಶಕ್ಕೆ ಏನು ನೀಡುತ್ತಿದ್ದೇವೆ ಎಂದು ಆತ್ಮಾವಲೋಕನ ಮಾಡಿಕೊಳ್ಳುತ್ತಾ ಬದುಕಬೇಕು. ದೇಶಪ್ರೇಮವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು” ಎಂದು ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ರಮೇಶ ಕಾಂಬಳೆ ಹಾಗೂ ಗಣ್ಯರುಗಳಾದ ಮಲ್ಲಯ್ಯ ಹಿರೇಮಠ, ಪತ್ರಿಗೌಡ್ರು, ಚೆನ್ನಬಸಪ್ಪ ಕರಡೆಣ್ಣವರ ಸೇರಿದಂತೆ ಶಾಲೆಯ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಹಾಗೂ ಊರಿನ ಹಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
