ಭಾರತೀಯ ಸೇನೆಯಲ್ಲಿ ಸುದೀರ್ಘ 23 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿ ತಾಯ್ನಾಡಿಗೆ ಮರಳಿದ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ಸೈನಿಕ ಮಹಾವೀರ ಕೋಟೆ ಯವರನ್ನು ಬೆಳಗಾವಿಯ ರೈಲ್ವೆ ನಿಲ್ದಾಣದಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.


“ಭಾರತ್ ಮಾತಾ ಕೀ ಜಯ್” “ವಂದೇ ಮಾತರಂ” ನಿವೃತ್ತ ಸೈನಿಕನಿಗೆ ಜಯವಾಗಲಿ ಎಂಬ ಘೋಷಣೆಗಳನ್ನು ಕೂಗುತ್ತಾ ಸೈನಿಕನನ್ನು ಬರಮಾಡಿಕೊಂಡು ನಗರದ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಚೆನ್ನಮ್ಮನ ಪುತ್ತಳಿಗೆ ಮಾಲಾರ್ಥನೆ ಸಲ್ಲಿಸಿ ನಂತರ ಮಹಾಒಕ್ಕೂಟದ ಸೈನಿಕ ಸಂಪರ್ಕ ಕೇಂದ್ರದಲ್ಲಿ ನಿವೃತ್ತಿಯಾದ ಸೈನಿಕನಿಗೆ ಸತ್ಕಾರ ಸಮಾರಂಭವನ್ನು ಆಯೋಜಿಸಲಾಗಿತ್ತು.

ಇತ್ತೀಚಿಗೆ ನಡೆಯುತ್ತಿರುವ ನಿವೃತ್ತ ಸೈನಿಕರ ಸ್ವಾಗತ ಕಾರ್ಯಕ್ರಮಗಳು ಯುವ ಪೀಳಿಗೆಗೆ ಪ್ರೇರಣಾದಾಯಕವಾಗಬೇಕು ಯುವಕರನ್ನು ದೇಶ ಸೇನೆಗೆ ಆಕರ್ಷಣೆ ಮಾಡುವಂತಾಗಬೇಕು ಎಂದು ಕಾರ್ಯಕ್ರಮವನ್ನು ಉದ್ದೇಶಿಸಿ ಮಹಾಒಕ್ಕೂಟದ ಜಿಲ್ಲಾಧ್ಯಕ್ಷ ಜಗದೀಶ ಪೂಜೇರಿ ಮಾತನಾಡಿದರು. ಈ ಸಂದರ್ಭದಲ್ಲಿ ಮಹಾಒಕ್ಕೂಟದ ಸಂಘಟನಾ ಕಾರ್ಯದರ್ಶಿ ಮಡಿವಾಳಪ್ಪ ಕಲಬಾವಿ, ಮಹೇಶ ಕಮ್ಮಾರ, ಹಿರಿಯರಾದ ಅಶೋಕ ಮಜಗಿ, ರಾಮಚಂದ್ರ ಸುತಾರ, ಮಹಾದೇವ ಹಾಲಗಿ, ಬಸಪ್ಪ ವನ್ನೂರ ಇನ್ನಿತರ ಪದಾಧಿಕಾರಿಗಳು, ಕೋಟೆ ಕುಟುಂಬದವರು ಭಾಗವಹಿಸಿದ್ದರು.

