80ನೇ ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಮುತ್ತೂರು ಗ್ರಾಮದ ಅಧಿದೇವತೆ ಮಹಾಲಕ್ಷ್ಮೀ ದೇವಿಗೆ ತ್ರಿವರ್ಣ ಸೀರೆಯಿಟ್ಟು ವಿಶೇಷ ಅಲಂಕಾರ ನೆರವೇರಿಸಲಾಯಿತು. ದೇಶಭಕ್ತಿ ಹಾಗೂ ದೈವಭಕ್ತಿಯ ಅನನ್ಯ ಸಂಗಮಕ್ಕೆ ಸಾಕ್ಷಿಯಾದ ಈ ಅಪರೂಪದ ಪೂಜಾ ಕೈಂಕರ್ಯವು ಭಕ್ತಾದಿಗಳ ಕಣ್ಣುಮನ ಸೆಳೆಯಿತು.

ಮುತ್ತೂರು ಗ್ರಾಮದ ಶ್ರೀ ಮಹಾಲಕ್ಷ್ಮೀ ದೇವಿ ದೇವಾಲಯದಲ್ಲಿ ಪ್ರತಿ ವರ್ಷ ಆಗಸ್ಟ್ 15ರಂದು ದೇವಿಗೆ ತ್ರಿವರ್ಣ ಬಣ್ಣದ ಸೀರೆಯನ್ನು ಉಡಿಸಿ ವಿಶೇಷ ಪೂಜೆ ಹಾಗೂ ಅಲಂಕಾರ ಸಲ್ಲಿಸುವ ವಿಶಿಷ್ಟ ಪರಂಪರೆ ನಡೆದುಕೊಂಡು ಬಂದಿದೆ. ಅದರಂತೆ ಈ ವರ್ಷವೂ ದೇವಿಗೆ ಕೇಸರಿ, ಬಿಳಿ ಹಾಗೂ ಹಸಿರು ಬಣ್ಣಗಳಿಂದ ಕಂಗೊಳಿಸುವ ಸುಂದರ ಸೀರೆಯನ್ನು ತೊಡಿಸಿ ಭಕ್ತಿ-ಶ್ರದ್ಧೆಯಿಂದ ಪೂಜಿಸಲಾಯಿತು. ಸ್ವಾತಂತ್ರ್ಯೋತ್ಸವದ ಶುಭ ಸಂದರ್ಭದಲ್ಲಿ ದೇವಿಯ ಈ ದಿವ್ಯ ತ್ರಿವರ್ಣ ರೂಪವನ್ನು ಕಣ್ಣುಂಬಿಕೊಳ್ಳಲು ನೂರಾರು ಭಕ್ತಾದಿಗಳು ಆಗಮಿಸಿ ದರ್ಶನ ಪಡೆದರು.
