ದೆಹಲಿ ಪ್ರವಾಸ ಸಹಜವಾದ ಭೇಟಿಯಾಗಿದ್ದು ಇದರಲ್ಲಿ ಯಾವುದೇ ವಿಶೇಷತೆಯಿಲ್ಲ. ಹೆಚ್ಚುವರಿ ಡಿಸಿಎಂ ಹುದ್ದೆಗಳ ನೇಮಕ ಕುರಿತು ಸದ್ಯಕ್ಕೆ ವರಿಷ್ಠರ ಮಟ್ಟದಲ್ಲಿ ಯಾವುದೇ ಚರ್ಚೆಯಾಗಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಅವರು ಸ್ಪಷ್ಟಪಡಿಸಿದ್ದಾರೆ.

ದೆಹಲಿ ಪ್ರವಾಸದ ಕುರಿತು ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಇದೊಂದು ಸಹಜವಾದ ಭೇಟಿಯಾಗಿದ್ದು ಇದರಲ್ಲಿ ಯಾವುದೇ ವಿಶೇಷತೆಯಿಲ್ಲ ಎಂದು ಸ್ಪಷ್ಟಪಡಿಸಿದರು. ಇನ್ನು ಹೆಚ್ಚುವರಿ ಡಿಸಿಎಂ ಹುದ್ದೆಗಳ ನೇಮಕ ಕುರಿತು ಸದ್ಯಕ್ಕೆ ವರಿಷ್ಠರ ಮಟ್ಟದಲ್ಲಿ ಯಾವುದೇ ಚರ್ಚೆಯಾಗಿಲ್ಲ, ಸೂಕ್ತ ಅವಕಾಶ ಬಂದಾಗ ಆ ಬಗ್ಗೆ ಮಾತುಕತೆ ನಡೆಸಲಾಗುವುದು ಎಂದರು. ಸೋಮವಾರದೊಳಗೆ ಸಚಿವರ ಖಾತೆ ಹಂಚಿಕೆ ಪೂರ್ಣಗೊಳ್ಳಲಿದ್ದು, ಈ ಸಂಬಂಧ ಮುಖ್ಯಮಂತ್ರಿಗಳು ದೆಹಲಿಗೆ ತೆರಳಿದ್ದಾರೆ. ಇದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ ಹಾಗೂ ಸಚಿವ ಸ್ಥಾನಕ್ಕಾಗಿ ಪಟ್ಟು ಹಿಡಿದಿರುವ ಶಾಸಕ ಎಂ. ಕೃಷ್ಣಪ್ಪ ಅವರ ಅಸಮಾಧಾನವನ್ನು ಸಿಎಂ ಸೇರಿದಂತೆ ಹೈಕಮಾಂಡ್ ನಾಯಕರು ಮಾತುಕತೆ ಮೂಲಕ ಸರಿಪಡಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬೈಟ್
ಸಂಪುಟದಲ್ಲಿ ಮಹಿಳೆಯರಿಗೆ ಹೆಚ್ಚಿನ ಅವಕಾಶ ನೀಡುವ ಕುರಿತು ಸರ್ಕಾರ ಧನಾತ್ಮಕವಾಗಿದ್ದು, ಸೂಕ್ತ ಪ್ರಾತಿನಿಧ್ಯ ನೀಡಲಿದೆ ಎಂದರು. ಇನ್ನು ಹಿರಿಯ ಶಾಸಕರಾದ ಬಸವರಾಜ ಹೊರಟ್ಟಿ ಅವರ ರಾಜೀನಾಮೆಗೆ ಸಂಬಂಧಿಸಿದಂತೆ ಮಾತನಾಡಿ, “ಅವರೇ ಸ್ವತಃ ರಾಜೀನಾಮೆ ನೀಡಿದ್ದು, ಇದಕ್ಕೆ ಬೇರೆ ಯಾವುದೇ ರಾಜಕೀಯ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಶೀಘ್ರದಲ್ಲೇ ಅವರ ಸ್ಥಾನಕ್ಕೆ ಹೊಸಬರನ್ನು ಆಯ್ಕೆ ಮಾಡಲಾಗುತ್ತದೆ” ಎಂದು ಸ್ಪಷ್ಟಪಡಿಸಿದರು. ಇದೇ ವೇಳೆ ರಾಜ್ಯದಲ್ಲಿನ ಭೀಕರ ಬರಗಾಲದ ಕುರಿತು ಪ್ರತಿಕ್ರಿಯಿಸಿ, ಸದ್ಯದಲ್ಲೇ ಜಂಟಿ ಸಮೀಕ್ಷೆ ವರದಿ ಸಲ್ಲಿಕೆಯಾಗಲಿದ್ದು, ವರದಿ ಕೈಸೇರಿದ ತಕ್ಷಣ ಬರಗಾಲ ಘೋಷಣೆ ಕುರಿತು ಸರ್ಕಾರ ಗಂಭೀರ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಿದೆ ಎಂದು ಸಚಿವರು ತಿಳಿಸಿದರು.
