ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಗಾಮನಗಟ್ಟಿ ಗ್ರಾಮದ ಕರಿಯಮ್ಮ ದೇವಿಗೆ ನೂತನ ತೇರು ನಿರ್ಮಿಸಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ಕಲಘಟಗಿ ತಾಲೂಕಿನ ಹುಲಕೊಪ್ಪ ಗ್ರಾಮಕ್ಕೆ ತೆರಳಿದ್ದ ಗ್ರಾಮಸ್ಥರು, ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿ ತೇರಿಗೆ ಅಗತ್ಯವಿರುವ ಕಟ್ಟಿಗೆಯನ್ನು ಭಕ್ತಿಯಿಂದ ಹೊತ್ತುಕೊಂಡು ವಿಜೃಂಭಣೆಯಿಂದ ಊರಿಗೆ ತಂದಿದ್ದಾರೆ.


ಇದೇ ಮೊದಲ ಬಾರಿಗೆ ಗ್ರಾಮದೇವತೆಗೆ ತೇರು ನಿರ್ಮಾಣ ಮಾಡಲು ಊರಿನ ಹಿರಿಯರು ನಿರ್ಧರಿಸಿದ್ದಾರೆ. ತೇರು ನಿರ್ಮಾಣದ ಪದ್ಧತಿ, ವಿಧಿವಿಧಾನಗಳು ಹಾಗೂ ಖರ್ಚು-ವೆಚ್ಚಗಳ ಕುರಿತು ಗ್ರಾಮಸ್ಥರಿಗೆ ಮಾಹಿತಿ ನೀಡಲಾಗಿತ್ತು. ಅದರಂತೆ, ಕಡೆಯ ಆಷಾಢ ಶುಕ್ರವಾರದಂದು ತೇರಿಗೆ ಕಟ್ಟಿಗೆ ತರಲು ನಿಗದಿಪಡಿಸಲಾಗಿತ್ತು.

ಅದರಂತೆ ಗ್ರಾಮದ ಮನೆಮನೆಗಳಲ್ಲಿ ಸಿಹಿ ಅಡುಗೆ ತಯಾರಿಸಿ ಹುಲಕೊಪ್ಪ ಗ್ರಾಮಕ್ಕೆ ತೆರಳಿದ ಗ್ರಾಮಸ್ಥರು, ಅಲ್ಲಿಯ ಗ್ರಾಮದೇವತೆಗಳಿಗೆ ಪೂಜೆ ಸಲ್ಲಿಸಿ ತೇರಿಗೆ ಬೇಕಾಗುವ ಮರದ ತುಂಡುಗಳನ್ನು ಹೊತ್ತು ತಂದರು. ಕಟ್ಟಿಗೆ ಊರಿಗೆ ತಲುಪುತ್ತಿದ್ದಂತೆ ಯುವಕರು ಡೊಳ್ಳು ಕುಣಿತದೊಂದಿಗೆ ಸಂಭ್ರಮಿಸಿದರು. ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ನಂತರ ಕಟ್ಟಿಗೆಯನ್ನು ದೇವಸ್ಥಾನದ ಆವರಣಕ್ಕೆ ತರಲಾಯಿತು.
