ಹಜರತ್ ನಿಜಾಮುದ್ದೀನ್ ರೈಲಿನಲ್ಲಿ ಪ್ರಯಾಣಿಕರೊಬ್ಬರಿಗೆ ಅವಧಿ ಮುಗಿದ (ಎಕ್ಸ್‌ಪೈರ್ಡ್) ಆಹಾರ ಪೊಟ್ಟಣ ಪೂರೈಸಿರುವ ಘಟನೆ ವರದಿಯಾಗಿದೆ. ಬೆಳಗಾವಿ ಮಾರ್ಗವಾಗಿ ಹುಬ್ಬಳ್ಳಿಗೆ ಆಗಮಿಸುತ್ತಿದ್ದ ರೈಲಿನಲ್ಲಿ ಈ ನಿರ್ಲಕ್ಷ್ಯ ಬೆಳಕಿಗೆ ಬಂದಿದ್ದು, ಕಳಪೆ ಸೇವೆ ಒದಗಿಸಿದ ಸಿಬ್ಬಂದಿ ವಿರುದ್ಧ ಕ್ರಮಕೈಗೊಳ್ಳುವಂತೆ ಆಕ್ರೋಶಗೊಂಡ ಪ್ರಯಾಣಿಕರು ಪಟ್ಟು ಹಿಡಿದಿದ್ದಾರೆ.

ಹಜರತ್ ನಿಜಾಮುದ್ದೀನ್‌ನಿಂದ ಕರ್ನಾಟಕಕ್ಕೆ ಸಂಚರಿಸುತ್ತಿದ್ದ ರೈಲು ಸಂಖ್ಯೆ 12630 (ಕರ್ನಾಟಕ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್) ಬೆಳಗಾವಿ ಮಾರ್ಗವಾಗಿ ಹುಬ್ಬಳ್ಳಿಗೆ ಆಗಮಿಸುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ರೈಲಿನಲ್ಲಿ ಡೆಲಿವರಿ ಬಾಯ್ ನೀಡಿದ್ದ ಪ್ಯಾಕೆಟ್ ಆಹಾರವನ್ನು ಪರಿಶೀಲಿಸಿದಾಗ, ಅದರ ಮೇಲಿದ್ದ ಎಕ್ಸ್‌ಪೈರಿ ಡೇಟ್ ಮುಗಿದಿರುವುದು ಕಂಡುಬಂದಿದೆ. ಇದರಿಂದ ಆಕ್ರೋಶಗೊಂಡ ಪ್ರಯಾಣಿಕರು ತಕ್ಷಣವೇ ರೈಲ್ವೇ ಇಲಾಖೆಗೆ ದೂರು (Complaint) ದಾಖಲಿಸಿದ್ದಾರೆ. ಪ್ರಯಾಣಿಕ ಅಧಿಕೃತವಾಗಿ ದೂರು ದಾಖಲಿಸುತ್ತಿದ್ದಂತೆ ಎಚ್ಚೆತ್ತುಕೊಂಡ ಡೆಲಿವರಿ ಬಾಯ್ ಹಾಗೂ ಮ್ಯಾನೇಜರ್ ಸಮಜಾಯಿಷಿ ನೀಡಲು ಯತ್ನಿಸಿದ್ದಾರೆ. ಸದ್ಯ ವಿಷಯ ತಿಳಿದ ರೈಲ್ವೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಪ್ರಯಾಣಿಕರ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿರುವ ಇಲಾಖೆಯ ಸಿಬ್ಬಂದಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ ವ್ಯಕ್ತವಾಗಿದೆ.
