Dharwad

ಹು-ಧಾ ಅವಳಿನಗರದಲ್ಲಿ ಮುಂದುವರಿದ ಹೆಚ್‌ಡಿ ಬಿಆರ್‌ಟಿಎಸ್ ಚಿಗರಿ ಬಸ್ ಅವಾಂತರ…

Share

ಹುಬ್ಬಳ್ಳಿ-ಧಾರವಾಡ ಅವಳಿನಗರದ ಪ್ರಯಾಣಿಕರಿಗೆ ತ್ವರಿತ ಸಂಚಾರ ಸೇವೆ ನೀಡಲು ಪ್ರಾರಂಭಿಸಲಾಗಿರುವ ಬಿಆರ್‌ಟಿಎಸ್ ‘ಚಿಗರಿ’ ಬಸ್‌ಗಳ ಅವಾಂತರಗಳು ಮುಂದುವರಿದಿವೆ. ಇಂದು ಧಾರವಾಡದ ಜನನಿಬಿಡ ಪ್ರದೇಶದಲ್ಲಿಯೇ ಚಿಗರಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಫುಟ್‌ಪಾತ್‌ಗೆ ನುಗ್ಗಿದ್ದು, ಭಾರಿ ಅನಾಹುತವೊಂದು ತಪ್ಪಿದೆ.

ಧಾರವಾಡದ ಅಂಜುಮನ್ ಸಂಸ್ಥೆಯ ಬಳಿಯ ಹೆಚ್‌ಡಿ ಬಿಆರ್‌ಟಿಎಸ್ ಟರ್ಮಿನಲ್‌ನಿಂದ ಹುಬ್ಬಳ್ಳಿಗೆ ತೆರಳಲು ಹೊರಬಂದ ಬಸ್, ಏಕಾಏಕಿ ಚಾಲಕನ ನಿಯಂತ್ರಣ ತಪ್ಪಿ ಫುಟ್‌ಪಾತ್‌ಗೆ ನುಗ್ಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಘಟನೆಯಲ್ಲಿ ಒಂದು ಬೈಕ್ ಹಾಗೂ ರಸ್ತೆಬದಿಯ ವ್ಯಾಪಾರಿಯ ತಳ್ಳುಗಾಡಿಗೆ ಹಾನಿಯಾಗಿದೆ. ಸದಾ ಜನರು ಓಡಾಡುವ ಪ್ರದೇಶದಲ್ಲಿಯೇ ಈ ಘಟನೆ ನಡೆದಿದ್ದು, “ಒಂದು ವೇಳೆ ಪಾದಚಾರಿಗಳ ಮೇಲೆ ನುಗ್ಗಿದ್ದರೆ ಏನಾಗುತ್ತಿತ್ತು?” ಎಂದು ಊಹಿಸಿಕೊಂಡು ಸ್ಥಳೀಯರು ಆತಂಕಗೊಂಡಿದ್ದರು.

ಇತ್ತೀಚೆಗಷ್ಟೇ ನವಲೂರು ಬಳಿ ಇಬ್ಬರು ಯುವತಿಯರಿಗೆ ಚಿಗರಿ ಬಸ್ ಡಿಕ್ಕಿಯಾಗಿತ್ತು. ಇದರಿಂದ ಆಕ್ರೋಶಗೊಂಡ ಜನರು ಬಸ್ ತಡೆದು ಕಳೆದ ಬುಧವಾರ ಸತ್ತೂರು ಬಳಿ ಪ್ರತಿಭಟನೆ ನಡೆಸಿದ್ದರು. ಈ ಘಟನೆ ಮಾಸುವ ಮುನ್ನವೇ ಈಗ ಮತ್ತೊಂದು ಬಿಆರ್‌ಟಿಎಸ್ ಚಿಗರಿ ಬಸ್ ಅವಾಂತರ ನಡೆದಿರುವುದು ಅವಳಿನಗರದ ಜನರ ಆಕ್ರೋಶಕ್ಕೆ ಕಾರಣವಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಧಾರವಾಡ ಸಂಚಾರಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Tags:

error: Content is protected !!