Vijaypura

ವಿಜಯಪುರ ಕಾಂಗ್ರೆಸ್‌ನಲ್ಲಿ ವಾರ್ ಡಿಕ್ಲೇರ್..! ಎಂ.ಬಿ. ಪಾಟೀಲ್ ವಿರುದ್ಧ ಯಶವಂತರಾಯಗೌಡ-ಅಪ್ಪಾಜಿ ನಾಡಗೌಡ ಕೆಂಡ; ಸಚಿವ ಸ್ಥಾನ ಕೈತಪ್ಪಿದ ಬೆನ್ನಲ್ಲೇ ಅಸಮಾಧಾನದ ಸ್ಫೋಟ!

Share

ರಾಜ್ಯ ಸಚಿವ ಸಂಪುಟ ವಿಸ್ತರಣೆ ಮುಗಿದರೂ… ವಿಜಯಪುರ ಕಾಂಗ್ರೆಸ್‌ನಲ್ಲಿ ರಾಜಕೀಯ ಕಾವು ಮತ್ತಷ್ಟು ಏರಿದೆ. ಸಚಿವ ಸ್ಥಾನ ಕೈತಪ್ಪಿದ ಬೆನ್ನಲ್ಲೇ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ಹಾಗೂ ಮುದ್ದೇಬಿಹಾಳ ಶಾಸಕ ಸಿ.ಎಸ್. ನಾಡಗೌಡ ಅಲಿಯಾಸ್ ಅಪ್ಪಾಜಿ ನಾಡಗೌಡ ಸಚಿವ ಎಂ.ಬಿ. ಪಾಟೀಲ್ ವಿರುದ್ಧ ಬಹಿರಂಗವಾಗಿಯೇ ವಾರ್ ಡಿಕ್ಲೇರ್ ಮಾಡಿದ್ದಾರೆ. “ಅವನಿರಬೇಕು… ನಾನಿರಬೇಕು” ಎನ್ನುವ ಮಟ್ಟಕ್ಕೆ ಭಿನ್ನಮತ ಸ್ಫೋಟಗೊಂಡಿದ್ದು, ವಿಜಯಪುರ ಕಾಂಗ್ರೆಸ್‌ನಲ್ಲಿ ಹೊಸ ರಾಜಕೀಯ ಸಂಘರ್ಷಕ್ಕೆ ನಾಂದಿ ಹಾಡಿದಂತಾಗಿದೆ. ಈ ಕುರಿತ ವರದಿ…

ಯಾವುದೇ ಸರ್ಕಾರದಲ್ಲಿ ಸಚಿವ ಸಂಪುಟ ವಿಸ್ತರಣೆ ಎಂದರೆ ಸಂಭ್ರಮದ ಜೊತೆಗೆ ಅಸಮಾಧಾನವೂ ಸಹಜ. ಡಿ.ಕೆ. ಶಿವಕುಮಾರ್ ನೇತೃತ್ವದ ಸಚಿವ ಸಂಪುಟ ವಿಸ್ತರಣೆಯಲ್ಲೂ ಅದೇ ಚಿತ್ರಣ ಕಂಡುಬಂದಿದೆ. ವಿಜಯಪುರ ಜಿಲ್ಲೆಯಿಂದ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್, ಮುದ್ದೇಬಿಹಾಳ ಶಾಸಕ ಸಿ.ಎಸ್. ನಾಡಗೌಡ ಹಾಗೂ ಬಸವನ ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ್ ಅವರಲ್ಲಿ ಯಾರಿಗೂ ಅವಕಾಶ ಸಿಗಲಿಲ್ಲ. ಪರಿಣಾಮ ಬಬಲೇಶ್ವರ ಶಾಸಕ ಎಂ.ಬಿ. ಪಾಟೀಲ್ ಮಾತ್ರ ಜಿಲ್ಲೆಯ ಏಕೈಕ ಸಚಿವರಾಗಿ ಉಳಿದಿದ್ದಾರೆ. ಆದರೆ ಇದೇ ಬೆಳವಣಿಗೆ ಜಿಲ್ಲೆಯ ಕಾಂಗ್ರೆಸ್ ರಾಜಕಾರಣದಲ್ಲಿ ಅಸಮಾಧಾನದ ಕಿಡಿಯನ್ನು ಹೊತ್ತಿಸಿದೆ.

ಸಚಿವ ಸ್ಥಾನ ಕೈತಪ್ಪುತ್ತಿದ್ದಂತೆ ಯಶವಂತರಾಯಗೌಡ ಪಾಟೀಲ್ ಹಾಗೂ ಅಪ್ಪಾಜಿ ನಾಡಗೌಡ ರಾಜೀನಾಮೆ ನೀಡಿದ ಬಳಿಕ ಬಹಿರಂಗವಾಗಿಯೇ ಸಚಿವ ಎಂ.ಬಿ. ಪಾಟೀಲ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ರಾಜಕೀಯ ವಾರ್ ಡಿಕ್ಲೇರ್ ಮಾಡಿದ್ದಾರೆ. ಆದರೆ, ಈ ಬೆಳವಣಿಗೆಗೆ ಪ್ರತಿಕ್ರಿಯಿಸಿರುವ ಸಚಿವ ಎಂ.ಬಿ. ಪಾಟೀಲ್, “ಇಂತಹ ವಿಚಾರಗಳಿಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ” ಎಂದು ತಿರುಗೇಟು ನೀಡಿದ್ದಾರೆ. ಒಂದೇ ಜಿಲ್ಲೆಯಲ್ಲಿ ಕಾಂಗ್ರೆಸ್ ನಾಯಕರ ನಡುವಿನ ಈ ಮುಸುಕಿನ ಗುದ್ದಾಟ ಮುಂದಿನ ದಿನಗಳಲ್ಲಿ ಯಾವ ರೂಪ ಪಡೆಯಲಿದೆ ಎಂಬುದು ಈಗ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಒಟ್ನಲ್ಲಿ ಸಚಿವ ಸಂಪುಟ ವಿಸ್ತರಣೆ ಮುಗಿದರೂ… ವಿಜಯಪುರ ಕಾಂಗ್ರೆಸ್‌ನ ಒಳಜಗಳ ಮಾತ್ರ ಈಗಷ್ಟೇ ಆರಂಭವಾಗಿದೆಯೇ ಎಂಬ ಪ್ರಶ್ನೆ ಮೂಡಿದೆ. ಈ ಅಸಮಾಧಾನ ಮಾತಿನ ಸಮರಕ್ಕೆ ಮಾತ್ರ ಸೀಮಿತವಾಗುತ್ತದೆಯೇ, ಅಥವಾ ಜಿಲ್ಲೆಯ ರಾಜಕೀಯ ಸಮೀಕರಣಗಳನ್ನೇ ಬದಲಾಯಿಸುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

 

Tags:

error: Content is protected !!