Vijaypura

ಮಹಾರಾಷ್ಟ್ರ ಮಳೆಗೆ ಉತ್ತರ ಕರ್ನಾಟಕ ಅಲರ್ಟ್: ಕೃಷ್ಣಾ-ಭೀಮಾ ನದಿಗಳಲ್ಲಿ ಪ್ರವಾಹದ ಭೀತಿ

Share

ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಕೃಷ್ಣಾ ನದಿ ಉಕ್ಕಿ ಹರಿಯುತ್ತಿದ್ದು, ಅಲ್ಮಟ್ಟಿ ಜಲಾಶಯಕ್ಕೆ ನೀರಿನ ಒಳಹರಿವು ಭಾರೀ ಪ್ರಮಾಣದಲ್ಲಿ ಹೆಚ್ಚಿದೆ. ಮತ್ತೊಂದೆಡೆ ಉತ್ತರ ಕರ್ನಾಟಕದಲ್ಲಿ ಭೀಮಾ ನದಿಯೂ ಪ್ರತ್ಯೇಕವಾಗಿ ಪ್ರವಾಹದ ರೂಪ ಪಡೆದುಕೊಂಡಿದೆ. ಎರಡೂ ನದಿಗಳ ನೀರಿನ ಮಟ್ಟ ಏರಿಕೆಯಿಂದ ನದಿ ತೀರದ ಜನರಲ್ಲಿ ಆತಂಕ ಮನೆ ಮಾಡಿದೆ. ಅಲಮಟ್ಟಿ ಜಲಾಶಯದ ಇಂದಿನ ಸ್ಥಿತಿ ಹಾಗೂ ಅಣೆಕಟ್ಟು ಆಡಳಿತದ ಎಚ್ಚರಿಕೆ ಕುರಿತು ಇಲ್ಲಿದೆ ಒಂದು ವರದಿ.

ನೆರೆ ರಾಜ್ಯ ಮಹಾರಾಷ್ಟ್ರದ ಪಶ್ಚಿಮ ಘಟ್ಟ ಹಾಗೂ ಕೃಷ್ಣಾ ನದಿಯ ಮೇಲ್ದಂಡೆ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆ ಸುರಿಯುತ್ತಿರುವ ಪರಿಣಾಮ ಅಲ್ಮಟ್ಟಿ ಜಲಾಶಯಕ್ಕೆ ನೀರಿನ ಒಳಹರಿವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸೋಮವಾರ ಬೆಳಿಗ್ಗೆ 8 ಗಂಟೆಯ ವೇಳೆಗೆ ಜಲಾಶಯಕ್ಕೆ 1 ಲಕ್ಷ 25 ಸಾವಿರ 855 ಕ್ಯೂಸೆಕ್ ನೀರು ಹರಿದು ಬಂದಿದೆ. ಇನ್ನೂ ಅಲಮಟ್ಟಿ ಜಲಾಶಯದ ನೀರಿನ ಮಟ್ಟ 518.94 ಮೀಟರ್ ತಲುಪಿದ್ದು, ಒಟ್ಟು ನೀರಿನ ಸಂಗ್ರಹ 111.969 ಟಿಎಂಸಿ ಹಾಗೂ ಜೀವಂತ ನೀರಿನ ಸಂಗ್ರಹ 94.349 ಟಿಎಂಸಿ ದಾಖಲಾಗಿದೆ. ಜಲಾಶಯದ ಗರಿಷ್ಠ ನೀರಿನ ಮಟ್ಟ 519.60 ಮೀಟರ್ ಆಗಿದ್ದು, ಗರಿಷ್ಠ ಸಂಗ್ರಹ ಸಾಮರ್ಥ್ಯ 123.081 ಟಿಎಂಸಿ ಆಗಿದೆ.

ಅಲ್ಲದೇ ಪ್ರಸ್ತುತ ಕೆಪಿಸಿಎಲ್ ಮೂಲಕ 42 ಸಾವಿರ 500 ಕ್ಯೂಸೆಕ್ ಹಾಗೂ ರೇಡಿಯಲ್ ಸ್ಪಿಲ್‌ವೇ ಗೇಟ್‌ಗಳ ಮೂಲಕ 85 ಸಾವಿರ 850 ಕ್ಯೂಸೆಕ್ ಸೇರಿ ಒಟ್ಟು 1 ಲಕ್ಷ 28 ಸಾವಿರ 350 ಕ್ಯೂಸೆಕ್ ನೀರನ್ನು ಕೃಷ್ಣಾ ನದಿಗೆ ಹರಿಸಲಾಗುತ್ತಿದೆ. ನೀರಾವರಿ, ಟ್ಯಾಂಕ್ ಭರ್ತಿ ಹಾಗೂ ಕುಡಿಯುವ ನೀರಿನ ಬಳಕೆಯನ್ನು ಸೇರಿಸಿದರೆ ಒಟ್ಟು ಹೊರಹರಿವು 1 ಲಕ್ಷ 29 ಸಾವಿರ 617 ಕ್ಯೂಸೆಕ್ ಆಗಿದೆ. ಇನ್ನೂ ಮೇಲ್ದಂಡೆ ಪ್ರದೇಶಗಳಲ್ಲಿ ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಅಲ್ಮಟ್ಟಿ ಜಲಾಶಯಕ್ಕೆ ಇನ್ನಷ್ಟು ನೀರು ಹರಿದು ಬರುವ ಸಾಧ್ಯತೆ ಇದೆ. ಈ ಕಾರಣದಿಂದ ಇಂದು ಬೆಳಿಗ್ಗೆ 10 ಗಂಟೆಯಿಂದ ನದಿಗೆ ಬಿಡಲಾಗುತ್ತಿರುವ ನೀರಿನ ಪ್ರಮಾಣವನ್ನು 1 ಲಕ್ಷ 30 ಸಾವಿರ ಕ್ಯೂಸೆಕ್‌ನಿಂದ ಹಂತ ಹಂತವಾಗಿ 1 ಲಕ್ಷ 50 ಸಾವಿರ ಕ್ಯೂಸೆಕ್‌ಗೆ ಹೆಚ್ಚಿಸಲಾಗುವುದು ಎಂದು ಅಣೆಕಟ್ಟು ಆಡಳಿತ ಎಚ್ಚರಿಕೆ ನೀಡಿದೆ. ಇನ್ನೊಂದೆಡೆ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದ ಉತ್ತರ ಕರ್ನಾಟಕದ ಭೀಮಾ ನದಿಯೂ ಪ್ರವಾಹದ ರೂಪ ಪಡೆದುಕೊಂಡಿದೆ. ಹೀಗಾಗಿ ಕೃಷ್ಣಾ ಮತ್ತು ಭೀಮಾ ನದಿಗಳ ತೀರ ಪ್ರದೇಶದ ಜನರು ನದಿ ಪಾತ್ರಕ್ಕೆ ಇಳಿಯದಂತೆ, ಜಾನುವಾರುಗಳನ್ನು ನದಿ ತೀರಕ್ಕೆ ಕೊಂಡೊಯ್ಯದಂತೆ ಹಾಗೂ ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಒಟ್ಟಾರೆ ಮಹಾರಾಷ್ಟ್ರದಲ್ಲಿ ಮಳೆ ಮುಂದುವರಿದರೆ ಕೃಷ್ಣಾ ನದಿಗೆ ಒಳಹರಿವು ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ. ಇದರ ಪರಿಣಾಮ ಅಲ್ಮಟ್ಟಿ ಜಲಾಶಯದಿಂದ ನೀರಿನ ಹೊರಹರಿವನ್ನೂ ಮತ್ತಷ್ಟು ಹೆಚ್ಚಿಸಬೇಕಾಗಬಹುದು. ಜೊತೆಗೆ ಭೀಮಾ ನದಿಯಲ್ಲಿಯೂ ಪ್ರವಾಹದ ಸ್ಥಿತಿ ಮುಂದುವರಿಯುವ ಸಾಧ್ಯತೆ ಇರುವುದರಿಂದ, ಎರಡೂ ನದಿಗಳ ತೀರ ಪ್ರದೇಶದ ಜನರು ಎಚ್ಚರಿಕೆಯಿಂದ ಇರಬೇಕೆಂದು ಅಧಿಕಾರಿಗಳು ಮನವಿ ಮಾಡಿದ್ದಾರೆ. ಸದ್ಯ ಪ್ರವಾಹದ ಭೀತಿಯು ಹೆಚ್ಚಾಗಿದೆ.

ವಿಜಯಕುಮಾರ ಸಾರವಾಡ
ಇನ್ ನ್ಯೂಜ್
ವಿಜಯಪುರ.

Tags:

error: Content is protected !!