Vijaypura

ಬಸ್ ನಿಲ್ಲಿಸದ ಆರೋಪ: ಅಡ್ಡಗಟ್ಟಿದ ವಿದ್ಯಾರ್ಥಿಗಳು, ಬಾಲಕಿಯ ಕೈಗೆ ಗಾಯ

Share

ವಿಜಯಪುರ ಜಿಲ್ಲೆಯ ಸಾರವಾಡ ಗ್ರಾಮದಲ್ಲಿ ಶಾಲಾ ಮಕ್ಕಳಿಗೆ ನಿತ್ಯದ ಬಸ್ ಸಮಸ್ಯೆ ತಾರಕಕ್ಕೇರಿದೆ. ಶಾಲೆಗೆ ತೆರಳಲು ಸರ್ಕಾರಿ ಬಸ್ ನಿಲ್ಲುತ್ತಿಲ್ಲ ಎಂದು ಆರೋಪಿಸಿ ವಿದ್ಯಾರ್ಥಿಗಳು ಬಸ್ ಅಡ್ಡಗಟ್ಟಿದ ಘಟನೆ ನಡೆದಿದೆ. ಇದೇ ವೇಳೆ ಬಸ್ ಹತ್ತುತ್ತಿದ್ದ ವಿದ್ಯಾರ್ಥಿನಿಯ ಕೈ ಬಾಗಿಲಲ್ಲಿ ಸಿಲುಕಿ ಗಾಯಗೊಂಡಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ. ಈ ಕುರಿತು ಒಂದು ವರದಿ. ಹೌದು… ವಿಜಯಪುರ ಜಿಲ್ಲೆಯ ಸಾರವಾಡ ಗ್ರಾಮದಲ್ಲಿ ಶಾಲಾ ಮಕ್ಕಳಿಗೆ ಸರ್ಕಾರಿ ಬಸ್ ಸಮಸ್ಯೆ ಮತ್ತೆ ಬೆಳಕಿಗೆ ಬಂದಿದೆ. ಬೆಳಿಗ್ಗೆ ಶಾಲೆಗೆ ತೆರಳಲು ಬಸ್ ನಿಲ್ದಾಣದಲ್ಲಿ ಕಾದು ನಿಂತಿದ್ದ ವಿದ್ಯಾರ್ಥಿಗಳು, ವಿಜಯಪುರ ನಗರ ಹಾಗೂ ವಿವಿಧ ಶಾಲೆಗಳಿಗೆ ತೆರಳುವ ಉದ್ದೇಶದಿಂದ ಬಸ್‌ಗಳಿಗೆ ಕೈ ತೋರಿಸಿದರೂ, ಹಲವು ಸರ್ಕಾರಿ ಬಸ್‌ಗಳು ನಿಲ್ಲಿಸದೆ ಮುಂದೆ ಸಾಗಿವೆ ಎಂದು ಆರೋಪಿಸಿದ್ದಾರೆ.

ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ಬಸ್‌ವೊಂದನ್ನು ಅಡ್ಡಗಟ್ಟಿದರು. ಇದೇ ವೇಳೆ ಬಸ್ ಹತ್ತಲು ಯತ್ನಿಸುತ್ತಿದ್ದ ಖಾಕಂಬಿ ವಾಲಿಕಾರ್ ಎಂಬ ವಿದ್ಯಾರ್ಥಿನಿಯ ಕೈಗೆ ಕಂಡೆಕ್ಟರ್ ಬಾಗಿಲು ಮುಚ್ಚಿದ ಪರಿಣಾಮ ಕೈಬೆರಳುಗಳು ಬಾಗಿಲಲ್ಲಿ ಸಿಲುಕಿ ಗಾಯಗೊಂಡಿವೆ. ನೋವಿನಿಂದ ವಿದ್ಯಾರ್ಥಿನಿ ಕಣ್ಣೀರು ಹಾಕಿದ ದೃಶ್ಯ ಸ್ಥಳದಲ್ಲಿದ್ದವರ ಮನಕಲಕುವಂತಿತ್ತು.

ಗಾಯಗೊಂಡ ವಿದ್ಯಾರ್ಥಿನಿ ಕಗ್ಗೋಡದ ವಸತಿ ಶಾಲೆಗೆ ತೆರಳುತ್ತಿದ್ದರು. ಸಾರವಾಡ ಗ್ರಾಮದಿಂದ ಪ್ರತಿದಿನ ವಿಜಯಪುರ ನಗರ ಸೇರಿದಂತೆ ವಿವಿಧ ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಸರ್ಕಾರಿ ಬಸ್‌ಗಳನ್ನೇ ಅವಲಂಬಿಸಿದ್ದಾರೆ. ಆದರೆ ಜಮಖಂಡಿ ಹಾಗೂ ಬಬಲೇಶ್ವರ ಕಡೆಯಿಂದ ಬರುವ ಬಸ್‌ಗಳು ವಿದ್ಯಾರ್ಥಿಗಳನ್ನು ಕಂಡರೂ ನಿಲ್ಲಿಸುವುದಿಲ್ಲ ಎಂಬ ಆರೋಪವನ್ನು ಮಕ್ಕಳು ಹಾಗೂ ಗ್ರಾಮಸ್ಥರು ಮಾಡಿದ್ದಾರೆ.

ಈ ಘಟನೆ ಬಳಿಕವಾದರೂ ವಿದ್ಯಾರ್ಥಿಗಳಿಗೆ ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸಿ, ಶಾಲಾ ವೇಳೆಯಲ್ಲಿ ಬಸ್‌ಗಳು ಕಡ್ಡಾಯವಾಗಿ ನಿಲುಗಡೆ ಮಾಡುವಂತೆ ಸಾರಿಗೆ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ವಿದ್ಯಾರ್ಥಿಗಳು ಹಾಗೂ ಪೋಷಕರು ಆಗ್ರಹಿಸಿದ್ದಾರೆ.

Tags:

error: Content is protected !!