ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೂತನ ಸಚಿವ ಸಂಪುಟ ವಿಸ್ತರಣೆಯ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಬೆಳಗಾವಿ ಜಿಲ್ಲೆಯಿಂದ ಸಚಿವ ಸ್ಥಾನಕ್ಕಾಗಿ ತೀವ್ರ ಪೈಪೋಟಿ ಏರ್ಪಟ್ಟಿದ್ದರೂ, ಹೈಕಮಾಂಡ್ ಅಂತಿಮವಾಗಿ ಅಥಣಿ ಶಾಸಕ ಲಕ್ಷ್ಮಣ ಸವದಿ ಅವರಿಗೆ ಮಣೆ ಹಾಕಿದೆ. ಬೆಳಗಾವಿಗೆ ಒಂದೇ ಒಂದು ಸಚಿವ ಸ್ಥಾನ ಸಿಕ್ಕಿದ್ದು, ರೇಸ್ನಲ್ಲಿದ್ದ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಅಶೋಕ ಪಟ್ಟಣ ಅವರಿಗೆ ಭಾರಿ ನಿರಾಸೆಯಾಗಿದೆ. ಈ ಕುರಿತು ಒಂದು ವಿಶೇಷ ವರದಿ.


ಸಿಎಂ ಡಿ.ಕೆ. ಶಿವಕುಮಾರ್ ಸಚಿವ ಸಂಪುಟ ವಿಸ್ತರಣೆ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದ್ದು, ಬೆಳಗಾವಿ ಜಿಲ್ಲೆಗೆ ಒಂದು ಮಾತ್ರ ಸಚಿವ ಸ್ಥಾನ ನೀಡಲಾಗಿದೆ.
ಹೌದು..ಬೆಳಗಾವಿ ಜಿಲ್ಲೆಯಿಂದ ಸಚಿವ ಸ್ಥಾನಕ್ಕಾಗಿ ಹಲವು ಕಾಂಗ್ರೆಸ್ ಶಾಸಕರು ಪೈಪೋಟಿಯಲ್ಲಿದ್ದರು. ಅಂತಿಮವಾಗಿ ಹೈಕಮಾಂಡ್ ಲಕ್ಷ್ಮಣ ಸವದಿ ಅವರ ಹೆಸರಿಗೆ ಮನ್ನಣೆ ನೀಡಿದ್ದು, ಜಿಲ್ಲೆಯ ಏಕೈಕ ಸಚಿವರಾಗಿ ಅವರು ಸಂಪುಟ ಸೇರಲಿದ್ದಾರೆ. ಇನ್ನು ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹಾಗೂ ರಾಮದುರ್ಗ ಶಾಸಕ ಅಶೋಕ ಪಟ್ಟಣ ಅವರಿಗೆ ಸಚಿವ ಸ್ಥಾನ ಕೈತಪ್ಪಿದೆ.
ನೂತನ ಸಚಿವರಾಗಿ ಲಕ್ಷ್ಮಣ ಸವದಿ, ಚೆಲುವರಾಯಸ್ವಾಮಿ, ಹೆಚ್.ಸಿ. ಬಾಲಕೃಷ್ಣ, ಜಮೀರ್ ಅಹ್ಮದ್ ಖಾನ್, ಗಾಯತ್ರಿ ಶಾಂತೇಗೌಡ, ಮಧು ಬಂಗಾರಪ್ಪ, ಅಜಯ್ ಸಿಂಗ್, ಶಿವರಾಜ್ ತಂಗಡಗಿ, ರುದ್ರಪ್ಪ ಲಮಾಣಿ, ರಘುಮೂರ್ತಿ, ರಿಜ್ವಾನ್ ಅರ್ಷದ್, ಶಿವಲಿಂಗೇಗೌಡ, ಪುಟ್ಟರಂಗಶೆಟ್ಟಿ, ಸಂತೋಷ್ ಲಾಡ್, ನರೇಂದ್ರಸ್ವಾಮಿ, ಮಂಕಾಳ ವೈದ್ಯ, ವಿಜಯಾನಂದ ಕಾಶಪ್ಪನವರ್, ಬಿ. ನಾಗೇಂದ್ರ, ಬಸವರಾಜ ರಾಯರೆಡ್ಡಿ ಹಾಗೂ ಕೆ.ಎಸ್. ಬಸವಂತಪ್ಪ ಅವರಿಗೆ ಸಚಿವ ಸಂಪುಟದಲ್ಲಿ ಅವಕಾಶ ನೀಡಲಾಗಿದೆ.
ಹಿಂದೆ ಸಿದ್ದರಾಮಯ್ಯ ಸರ್ಕಾರದಲ್ಲಿ ಬೆಳಗಾವಿ ಜಿಲ್ಲೆಯ 11 ಕಾಂಗ್ರೆಸ್ ಶಾಸಕರ ಪೈಕಿ ಯಮಕನಮರಡಿ ಶಾಸಕ ಸತೀಶ್ ಜಾರಕಿಹೊಳಿ, ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಮಾತ್ರ ಮಂತ್ರಿ ಸ್ಥಾನ ಒಲಿದು ಬಂದಿತ್ತು. ಈಗ ಡಿ.ಕೆ. ಶಿವಕುಮಾರ ಮುಖ್ಯಮಂತ್ರಿ ಆದ ನಂತರ ನೂತನ ಸಂಪುಟದಲ್ಲಿ ಈಗ ಅಥಣಿ ಶಾಸಕ ಲಕ್ಷಣ ಸವದಿ ಅವರಿಗೆ ಸಚಿವ ಸ್ಥಾನ ಅದೃಷ್ಟ ಒದಗಿ ಬಂದಿದೆ. ಆದರೆ ಕೊನೆವರೆಗೂ ತಮ್ಮನ್ನು ಮಂತ್ರಿ ಮಾಡುವಂತೆ ಕಾಂಗ್ರೆಸ್ ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿದ್ದ ಗ್ರಾಮೀಣ ಶಾಸಕಿ ಲಕ್ಮೀ ಹೆಬ್ಬಾಳಕರ ಹಾಗೂ ರಾಮದುರ್ಗ ಶಾಸಕ ಅಶೋಕ ಪಟ್ಟಣ ಅವರಿಗೆ ಈಗ ಭಾರಿ ನಿರಾಸೆಯಾಗಿದೆ.
ಈಗ ಡಿ.ಕೆ. ಶಿವಕುಮಾರ ಮುಖ್ಯಮಂತ್ರಿ ಆಗಿ ಆಯ್ಕೆ ನಂತರ ಸಂಪುಟದಲ್ಲಿ ತಮ್ಮನ್ನು ಮಂತ್ರಿ ಮಾಡುವಂತೆ ಬೆಳಗಾವಿ ಜಿಲ್ಲೆಯ 5ಕ್ಕೂ ಅಧಿಕ ಶಾಸಕರು ಕಾಂಗ್ರೆಸ್ ಹೈಕಮಾಂಡ್ ಮೇಲೆ ಒತ್ತಡ ಹೇರಿದ್ದರು. ಆದರೆ ಈ ರೇಸ್ ನಲ್ಲಿ ಅಥಣಿ ಶಾಸಕ ಲಕ್ಷ್ಮಣ ಸವದಿ ಹಾಗೂ ಲಕ್ಮೀ ಹೆಬ್ಬಾಳಕರ ಅವರ ಹೆಸರುಗಳು ಮುಂಚೂಣಿಯಲ್ಲಿದ್ದವು. ಒಂದೆಡೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಈಗ ತಮ್ಮ ಗುರು ಡಿ.ಕೆ. ಶಿವಕುಮಾರ್ ಸಂಪುಟದಲ್ಲೂ ಮಂತ್ರಿ ಆಗುವ ಉತ್ಸಾಹದಲ್ಲಿದರೆ, ಇನ್ನೊಂದೆಡೆ ಸವದಿ ಅವರು ಕೈ ಪಕ್ಷಕ್ಕೆ ಬರಲು ಡಿಕೆಶಿ ಅವರೇ ಬಹುಮುಖ್ಯ ಪಾತ್ರ ವಹಿಸಿದ್ದರು ಎನ್ನಲಾಗಿತ್ತು. ಹೀಗಿರುವಾಗ ಹೈಕಮಾಂಡ್ ಅಳೆದು ತೂಗಿ ಬೆಳಗಾವಿ ೫ಕ್ಕೂ ಹೆಚ್ಚು ಶಾಸಕರಲ್ಲಿ ಸವದಿ ಅವರಿಗೆ ಮಣೆ ಹಾಕಿದೆ.
ಸಿದ್ದರಾಮಯ್ಯ ಸರ್ಕಾರದಲ್ಲೇ ಮಂತ್ರಿ ಆಗಿರುವ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಈಗ ತಮ್ಮ ಗುರು ಡಿ.ಕೆ. ಶಿವಕುಮಾರ್ ಸಂಪುಟದಲ್ಲೂ ಮಂತ್ರಿ ಆಗುವ ಉತ್ಸಾಹದಲ್ಲಿದ್ದರು. ಆದರೆ ಕೊನೆ ಕ್ಷಣದಲ್ಲಿ ಹೆಬ್ಬಾಳಕರ ಹೆಸರು ಕೈ ಬಿಟ್ಟು ಅಥಣಿ ಸಾಹುಕಾರ್ ಅದೃಷ್ಟ ಒಲಿದು ಬಂದಿದೆ.
ಮುಂದಿನ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ಸಚಿವ ಸಂಪುಟ ವಿಸ್ತರಣೆಯಲ್ಲಿ ಹೊಸ ಮುಖಗಳಿಗೆ ಆದ್ಯತೆ ನೀಡುವ ತಂತ್ರವನ್ನು ಕಾಂಗ್ರೆಸ್ ರೂಪಿಸಿದೆ. ಜಾತಿವಾರು ಸಮೀಕರಣ, ಪ್ರಾದೇಶಿಕ ಸಮತೋಲನ ಹಾಗೂ ಜಿಲ್ಲಾ ಪ್ರಾತಿನಿಧ್ಯವನ್ನು ಪರಿಗಣಿಸಿ ಹೊಸಬರು ಮತ್ತು ಅನುಭವಿಗಳ ಸಮನ್ವಯದ ಸಂಪುಟ ರಚಿಸಲು ಹೈಕಮಾಂಡ್ ಯೋಜನೆ ರೂಪಿಸಿದೆ. ಭವಿಷ್ಯದ ನಾಯಕತ್ವ ಬೆಳೆಸುವ ಉದ್ದೇಶದಿಂದ ಯುವ ಶಾಸಕರಿಗೂ ಹಾಗೂ ಹಳೆ ಶಾಸಕರಿಗೂ ಅವಕಾಶ ನೀಡಲಾಗಿದೆ.
ಮೂಲಗಳ ಪ್ರಕಾರ, ಇಂದು ಸಂಜೆ ಬೆಂಗಳೂರಿನ ಲೋಕಭವನದಲ್ಲಿ ನೂತನ ಸಚಿವರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ನಡೆಯುವ ಸಾಧ್ಯತೆ ಇದೆ. ಈ ಸಂಬಂಧ ಮುಖ್ಯಮಂತ್ರಿಗಳ ಕಚೇರಿಯಿಂದ ಅಗತ್ಯ ಸಿದ್ಧತೆ ಆರಂಭಿಸುವಂತೆ ಸೂಚನೆ ನೀಡಲಾಗಿದೆ. ರಾಜಭವನ ಹಾಗೂ ಲೋಕೋಪಯೋಗಿ ಇಲಾಖೆಗೆ ಕೂಡ ಸಂದೇಶ ರವಾನೆಯಾಗಿದೆ. ಒಟ್ಟಾರೆ ಡಿ.ಕೆ. ಶಿವಕುಮಾರ್ ಸಂಪುಟದಲ್ಲಿ ಬೆಳಗಾವಿಯ ಜಿಲ್ಲೆಯ ಅಥಣಿ ಸಾಹುಕಾಗೆ ಸಚಿವ ಸ್ಥಾನದ ಅದೃಷ್ಠ ಒದಗಿ ಬಂದಿದ್ದು, ಅಥಣಿ ತಾಲೂಕಿನಲ್ಲಿ ಎಲ್ಲಡೆ ಸಂತಸ ಮನೆ ಮಾಡಿದೆ.
