ಮೈಸೂರಿನ ಪ್ರಸಿದ್ಧ ರಾಮಕೃಷ್ಣ ಆಶ್ರಮದ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ ಹಾಗೂ ವಿವೇಕ ಸ್ಮಾರಕವನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, ಮೈಸೂರು ಅನಾದಿ ಕಾಲದಿಂದಲೂ ಭಾರತದ ಸಾಂಸ್ಕೃತಿಕ ಕೇಂದ್ರವಾಗಿದ್ದು, ಇಲ್ಲಿನ ಮಣ್ಣಿನ ಕಣಕಣದಲ್ಲೂ ದೇಶದ ಇತಿಹಾಸ ಎದ್ದು ಕಾಣುತ್ತದೆ ಎಂದು ಬಣ್ಣಿಸಿದರು.


ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ರಾಮಕೃಷ್ಣ ಆಶ್ರಮದ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ ಮತ್ತು ವಿವೇಕ ಸ್ಮಾರಕಕ್ಕೆ ಚಾಲನೆ ನೀಡಿದರು. ಈ ವೇಳೆ ವಿವೇಕಾನಂದರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ, ಸಸಿ ನೆಡುವ ಮೂಲಕ ಪರಿಸರ ಜಾಗೃತಿ ಸಂದೇಶ ಸಾರಿದರು. ತದನಂತರ ಆಶ್ರಮದಲ್ಲಿ ವಿವೇಕಾನಂದರಿಗೆ ಸಂಬಂಧಿಸಿದ ಅಪರೂಪದ ಛಾಯಾಚಿತ್ರಗಳು, ಐತಿಹಾಸಿಕ ದಾಖಲೆಗಳು ಹಾಗೂ ಪತ್ರಗಳನ್ನು ವೀಕ್ಷಿಸಿದ ಪ್ರಧಾನಿ, ಪ್ರತಿಮೆ ಬಳಿ ಕೆಲಕಾಲ ಧ್ಯಾನ ನಿರತರಾಗಿ ಸಾಂಸ್ಕೃತಿಕ ಕೇಂದ್ರದ ವಿವಿಧ ವಿಭಾಗಗಳನ್ನು ವೀಕ್ಷಿಸಿದರು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು “ವ್ಯಕ್ತಿಯೊಬ್ಬ ಮಹಾ ವಿಭೂತಿಯಾಗಲು ಜೇವನದಲ್ಲಿ ಕಠಿಣ ತಪಸ್ಸು ಹಾಗೂ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ‘ಜೀವ ಸೇವೆಯೇ ಶಿವ ಸೇವೆ’ ಎಂಬ ತತ್ವ ನೀಡಿದ ವಿವೇಕಾನಂದರು ಯುವ ಸನ್ಯಾಸಿಯಾಗಿ ಮೈಸೂರಿಗೆ ಬಂದಾಗ ಇಲ್ಲಿನ ಮಹಾರಾಜರು ಅವರ ವಿಚಾರಗಳನ್ನು ಗೌರವಿಸಿದ್ದರು. ಅಂದಿನ ಗುಲಾಮಗಿರಿಯಲ್ಲಿದ್ದ ಭಾರತದ ಯುವಕರು ಇಂದು ಎ.ಐ, ತಂತ್ರಜ್ಞಾನ ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಇತಿಹಾಸ ಬರೆದು ಜಗತ್ತೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದ್ದಾರೆ” ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, “ಅಂದಿನ ಕಾಲದಲ್ಲೇ ವಿವೇಕಾನಂದರಿಗೆ ಪ್ರೋತ್ಸಾಹ ನೀಡಿ ವಿದೇಶದಲ್ಲಿ ಭಾರತದ ಕೀರ್ತಿ ಬೆಳಗಲು ಕಾರಣವಾದ ಮೈಸೂರಿನ ಇತಿಹಾಸವೇ ಇಡೀ ದೇಶದ ಇತಿಹಾಸವಾಗಿದೆ. ‘ಯುವ ಯುಗ ಮತ್ತು ನವ ಯುಗ’ ನಮ್ಮ ಮುಖ್ಯ ಘೋಷಣೆಯಾಗಿದ್ದು, ಯುವಶಕ್ತಿಯನ್ನು ಸದುಪಯೋಗಪಡಿಸಿಕೊಂಡು ಕರ್ನಾಟಕದ ಅಭಿವೃದ್ಧಿಗೆ ಶ್ರಮಿಸಬೇಕಿದೆ. ಪ್ರಧಾನಿಗಳ ಈ ಭೇಟಿ ಐತಿಹಾಸಿಕ” ಎಂದರು.
ಈ ಸಮಾರಂಭದಲ್ಲಿ ರಾಜ್ಯಪಾಲ ಥಾವರಚಂದ್ ಗೆಹ್ಲೋತ್, ಗೌರವ ಅತಿಥಿಯಾಗಿ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಹಾಗೂ ಶಾಸಕ ಕೆ. ಹರೀಶ್‌ಗೌಡ ಸೇರಿದಂತೆ ಹಲವು ಪ್ರಮುಖರು ಪಾಲ್ಗೊಂಡಿದ್ದರು.
