Vijaypura

ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆಯಲ್ಲಿ ಗೊಂದಲ; ಪ್ರಶ್ನೆ ಪತ್ರಿಕೆ ವಿಳಂಬಕ್ಕೆ ಅಭ್ಯರ್ಥಿಗಳ ಆಕ್ರೋಶ, ಕಾಲೇಜು ಗೇಟ್‌ಗೆ ಹಾನಿ

Share

ಇಂದು ನಡೆದ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿಯ ಲಿಖಿತ ಪರೀಕ್ಷೆ ವೇಳೆ ವಿಜಯಪುರ ಜಿಲ್ಲೆಯ ತಿಕೋಟಾದ ಪರೀಕ್ಷಾ ಕೇಂದ್ರದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು. ಪ್ರಶ್ನೆ ಪತ್ರಿಕೆ ವಿತರಣೆಯಲ್ಲಿ ವಿಳಂಬವಾಗಿದೆ ಎಂದು ಆರೋಪಿಸಿದ ಅಭ್ಯರ್ಥಿಗಳು ಪ್ರತಿಭಟನೆ ನಡೆಸಿ, ಕಾಲೇಜಿನ ಮುಖ್ಯ ಗೇಟ್‌ಗೆ ಹಾನಿ ಉಂಟುಪಡಿಸಿದ ಘಟನೆ ಭಾನುವಾರ ನಡೆದಿದೆ.

ವಿಜಯಪುರ ಜಿಲ್ಲೆಯ ತಿಕೋಟಾದ ಕೋಟ್ಯಾಳ್ ರಸ್ತೆಯಲ್ಲಿರುವ ಶಾರದಾಂಬಾ ಪಿಯು ಕಾಲೇಜಿನಲ್ಲಿ ಪರೀಕ್ಷೆ ಆಯೋಜಿಸಲಾಗಿತ್ತು. ಪರೀಕ್ಷೆಯ ನಿಯಮಾನುಸಾರ ಬೆಳಗ್ಗೆ 10.30ಕ್ಕೆ ಪ್ರಶ್ನೆ ಪತ್ರಿಕೆ ವಿತರಿಸಬೇಕಾಗಿದ್ದರೂ, ಸುಮಾರು 11 ಗಂಟೆಯ ವೇಳೆಗೆ ಮಾತ್ರ ವಿತರಿಸಲಾಗಿದೆ ಎಂದು ಅಭ್ಯರ್ಥಿಗಳು ಆರೋಪಿಸಿದ್ದಾರೆ.
ಪ್ರಶ್ನೆ ಪತ್ರಿಕೆ ವಿತರಣೆಯಲ್ಲಿ ಉಂಟಾದ ವಿಳಂಬದಿಂದ ಆತಂಕಗೊಂಡ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದ ಒಳಗೆ ಹಾಗೂ ಹೊರಗೆ ಪ್ರತಿಭಟನೆ ನಡೆಸಿದರು. ಸಮಯದ ಕೊರತೆಯಿಂದ ಪರೀಕ್ಷೆ ಬರೆಯಲು ತೊಂದರೆ ಯಾಗುತ್ತದೆ ಹಾಗೂ ಪರೀಕ್ಷಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇಲ್ಲ ಎಂದು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯ ವೇಳೆ ಕೆಲ ಅಭ್ಯರ್ಥಿಗಳು ಕಾಲೇಜಿನ ಮುಖ್ಯ ಗೇಟ್‌ಗೆ ಹಾನಿ ಉಂಟು ಪಡಿಸಿದರು. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ವಿಜಯಪುರ ಜಿಲ್ಲಾಧಿಕಾರಿ ಆನಂದ ಕೆ. ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯ ಪರಿಶೀಲನೆ ನಡೆಸಿದರು. ಅಭ್ಯರ್ಥಿಗಳ ಅಹವಾಲು ಆಲಿಸಿದ ಅವರು, ಪರೀಕ್ಷಾ ಕೇಂದ್ರದ ಅಧಿಕಾರಿ ಗಳಿಂದ ವಿಳಂಬಕ್ಕೆ ಕಾರಣವೇನು ಎಂಬ ಕುರಿತು ಮಾಹಿತಿ ಪಡೆದು, ಅಭ್ಯರ್ಥಿಗಳನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು.
“ನಾವು ತಿಂಗಳುಗಟ್ಟಲೆ ಶ್ರಮಪಟ್ಟು ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡಿದ್ದೇವೆ. ಪ್ರಶ್ನೆ ಪತ್ರಿಕೆ ಅರ್ಧ ಗಂಟೆ ತಡವಾಗಿ ನೀಡಿದರೆ ಉತ್ತರಿಸಲು ಸಾಕಷ್ಟು ಸಮಯ ಸಿಗುವುದಿಲ್ಲ. ಇಂತಹ ನಿರ್ಲಕ್ಷ್ಯದಿಂದ ನಮ್ಮ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ” ಎಂದು ಅಭ್ಯರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದರು.
ಘಟನೆಯ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.

Tags:

error: Content is protected !!