ಅನೇಕ ವರ್ಷಗಳಿಂದ ತಾಂತ್ರಿಕ ಹಾಗೂ ಕಾನೂನು ಅಡೆತಡೆಗಳಿಂದ ನೆನೆಗುದಿಗೆ ಬಿದ್ದಿದ್ದ ವಿಜಯಪುರ ವಿಮಾನ ನಿಲ್ದಾಣ ಯೋಜನೆ ಇದೀಗ ಪೂರ್ಣಗೊಳ್ಳುವ ಹಂತ ತಲುಪಿದೆ. ಸುಪ್ರೀಂ ಕೋರ್ಟ್ನಿಂದ ಅನುಮತಿ ದೊರೆತಿರುವ ಹಿನ್ನೆಲೆಯಲ್ಲಿ ಮುಂದಿನ ಮೂರು ತಿಂಗಳೊಳಗೆ ವಿಮಾನ ಹಾರಾಟ ಆರಂಭವಾಗುವ ನಿರೀಕ್ಷೆ ವ್ಯಕ್ತವಾಗಿದೆ. ಈ ಕುರಿತು ಕೆಪಿಸಿಸಿ ವಕ್ತಾರ ಎಸ್.ಎಂ. ಪಾಟೀಲ್ ಗಣಿಹಾರ ಮಾಹಿತಿ ನೀಡಿದ್ದಾರೆ.

ವಿಜಯಪುರ ನಗರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್.ಎಂ. ಪಾಟೀಲ್ ಗಣಿಹಾರ, ವಿಜಯಪುರ ವಿಮಾನ ನಿಲ್ದಾಣ ಯೋಜನೆ ಹಲವು ವರ್ಷಗಳಿಂದ ಕಾನೂನು ಮತ್ತು ತಾಂತ್ರಿಕ ಸಮಸ್ಯೆಗಳಿಂದ ಸ್ಥಗಿತಗೊಂಡಿತ್ತು. ಸಚಿವ ಡಾ. ಎಂ.ಬಿ. ಪಾಟೀಲ್ ವಿಶೇಷ ಆಸಕ್ತಿ ವಹಿಸಿ ನ್ಯಾಯಾಂಗದಲ್ಲಿ ಸಮರ್ಥವಾಗಿ ಹೋರಾಟ ನಡೆಸಿದ ಪರಿಣಾಮ ಯೋಜನೆಗೆ ಮರುಜೀವ ಸಿಕ್ಕಿದೆ ಎಂದು ಹೇಳಿದರು. ಮೊದಲಿಗೆ ಸಣ್ಣ ವಿಮಾನ ನಿಲ್ದಾಣವಾಗಿ ರೂಪಿಸಲಾಗಿದ್ದ ಯೋಜನೆಯನ್ನು ಬಳಿಕ ಮೇಲ್ದರ್ಜೆಗೇರಿಸಿ ಅಂತರರಾಷ್ಟ್ರೀಯ ಮಟ್ಟದ ಮಾನದಂಡಗಳಿಗೆ ಅನುಗುಣವಾಗಿ ಅಭಿವೃದ್ಧಿಪಡಿಸಲಾಗಿದೆ. ಶೀಘ್ರದಲ್ಲೇ ನಾಗರಿಕ ವಿಮಾನಯಾನ ಇಲಾಖೆಯ ಮಹಾನಿರ್ದೇಶಕರು ಕಾಮಗಾರಿಗಳ ಪರಿಶೀಲನೆ ನಡೆಸಲಿದ್ದು, ನಂತರ ವಿಮಾನ ಹಾರಾಟಕ್ಕೆ ಅಗತ್ಯ ಕ್ರಮಗಳು ಪೂರ್ಣಗೊಳ್ಳಲಿವೆ ಎಂದು ಅವರು ತಿಳಿಸಿದರು. ವಿಮಾನ ನಿಲ್ದಾಣ ಆರಂಭವಾದ ಬಳಿಕ ವಿಜಯಪುರ ಸೇರಿದಂತೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಿಗೆ ಅನುಕೂಲವಾಗಲಿದೆ. ಕೃಷಿ ಉತ್ಪನ್ನಗಳ ಸಾಗಣೆ, ಶಿಕ್ಷಣ, ಕೈಗಾರಿಕೆ, ಪ್ರವಾಸೋದ್ಯಮ ಹಾಗೂ ವ್ಯಾಪಾರ ವಹಿವಾಟಿಗೆ ಹೊಸ ಅವಕಾಶಗಳು ಸೃಷ್ಟಿಯಾಗಲಿದ್ದು, ಪ್ರದೇಶದ ಆರ್ಥಿಕ ಅಭಿವೃದ್ಧಿಗೆ ಇದು ಮಹತ್ವದ ಮೈಲಿಗಲ್ಲಾಗಲಿದೆ ಎಂದು ಎಸ್.ಎಂ. ಪಾಟೀಲ್ ಗಣಿಹಾರ ಅಭಿಪ್ರಾಯಪಟ್ಟರು.
