Vijaypura

ಸಂಪುಟ ವಿಸ್ತರಣೆ ವಿಳಂಬದ ಹಿಂದೆ ಸಿಎಂ ಲಾಭದ ರಾಜಕೀಯ; ಶಾಸಕ ಯತ್ನಾಳ್ ಗಂಭೀರ ಆರೋಪ!

Share

ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ವಿಳಂಬವಾಗುತ್ತಿರುವುದಕ್ಕೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎಲ್ಲಾ ಇಲಾಖೆಗಳನ್ನು ತಮ್ಮ ಬಳಿಯೇ ಇಟ್ಟುಕೊಳ್ಳಲು ಡಿಕೆ ಶಿವಕುಮಾರ್ ನೆಪಗಳನ್ನು ಹೇಳುತ್ತಿದ್ದಾರೆ ಎಂದು ಆರೋಪಿಸಿರುವ ಅವರು, ರಾಜ್ಯದಲ್ಲಿ ಆಡಳಿತ ಒಂದೇ ಕಡೆ ಕೇಂದ್ರೀಕೃತವಾಗಿದೆ ಎಂದು ವಿಜಯಪುರದಲ್ಲಿ ವಾಗ್ದಾಳಿ ನಡೆಸಿದ್ದಾರೆ.

ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಮಾತನಾಡಿದ ನಗರ ಶಾಸಕ ಯತ್ನಾಳ್, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಬ್ಯುಸಿಯಾಗಿದ್ದಾರೆ ಹಾಗೂ ಸೋನಿಯಾ ಗಾಂಧಿಯವರಿಗೆ ಅನಾರೋಗ್ಯ ಎಂಬಿತ್ಯಾದಿ ನೆಪಗಳನ್ನು ಹೇಳಿ ಸಂಪುಟ ವಿಸ್ತರಣೆಯನ್ನು ಮುಂದೂಡಲಾಗುತ್ತಿದೆ ಎಂದರು. ಸಂಪುಟ ವಿಸ್ತರಣೆ ತಡವಾದಷ್ಟೂ ಎಲ್ಲಾ ಇಲಾಖೆಗಳು ತಮ್ಮ ಕೈಯಲ್ಲೇ ಇರುತ್ತವೆ ಮತ್ತು ಸಂಪನ್ಮೂಲ ಸಂಗ್ರಹವಾಗುತ್ತದೆ ಎಂಬ ಕಾರಣಕ್ಕೆ ಸಿಎಂ ಹೀಗೆ ಮಾಡುತ್ತಿದ್ದಾರೆ. ಸಚಿವರಿಲ್ಲದೇ ಅನೇಕ ಇಲಾಖೆಗಳ ಫೈಲ್‌ಗಳು ಪೆಂಡಿಂಗ್ ಬಿದ್ದಿದ್ದು, ಅಧಿಕಾರಿಗಳು ಕೆಲಸ ಮಾಡದೇ ನೆಪ ಹೇಳುತ್ತಿದ್ದಾರೆ ಎಂದು ಕಿಡಿಕಾರಿದರು.

ಯಾವುದೇ ಸರ್ಕಾರವಿದ್ದರೂ ಸಿಎಂ ಪ್ರಮಾಣವಚನ ಸ್ವೀಕರಿಸುವಾಗಲೇ ಪೂರ್ಣ ಪ್ರಮಾಣದ ಸಚಿವರ ನೇಮಕವಾಗಬೇಕು; ಇಲ್ಲವಾದರೆ ನಿತ್ಯ ಲಾಬಿ, ಬೇಡಿಕೆ ಪೂರೈಸುವುದರಲ್ಲೇ ಕಾಲ ಕಳೆಯಬೇಕಾಗುತ್ತದೆ ಎಂದು ಯತ್ನಾಳ್ ಹೇಳಿದರು. ಇದೇ ವೇಳೆ ರಾಜ್ಯದ ಬರ ಪರಿಸ್ಥಿತಿಯ ಕುರಿತು ಕಳವಳ ವ್ಯಕ್ತಪಡಿಸಿದ ಅವರು, “ರಾಜ್ಯದಲ್ಲಿ ಬರವಿದ್ದರೂ ಕೃಷಿ ಸಚಿವರಿಲ್ಲ, ಸಿಎಂ ಜಮೀನಿನಲ್ಲಿ ಫೋಟೋ ತೆಗೆಸಿಕೊಂಡು ಬಂದರೆ ರೈತರಿಗೆ ಪರಿಹಾರ ಸಿಗಲ್ಲ. ಕೇಂದ್ರದ ತಂಡ ಬಂದು ಅಧ್ಯಯನ ನಡೆಸಬೇಕಿತ್ತು. ಆದರೆ ಪ್ರಸ್ತುತ ಆಡಳಿತ ಎಂದರೆ ಡಿಕೆ ಶಿವಕುಮಾರ್ ಎಂಬಂತಾಗಿದೆ” ಎಂದು ಆಕ್ರೋಶ ಹೊರಹಾಕಿದರು.

Tags:

error: Content is protected !!