ಖಾನಾಪುರ ತಾಲೂಕಿನ ಕುಡಿಯುವ ಹಾಗೂ ನೀರಾವರಿ ನೀರನ್ನು ಹೊರ ತಾಲೂಕುಗಳಿಗೆ ನೀಡುವ ನೀರು ಎತ್ತುವ ಯೋಜನೆ ವಿರುದ್ಧ ತಾಲೂಕು ಬ್ಲಾಕ್ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಮೊದಲು ಖಾನಾಪುರದ ಅಗತ್ಯ ಪೂರೈಕೆಯಾಗಬೇಕು, ಆ ಬಳಿಕವಷ್ಟೇ ಹೆಚ್ಚುವರಿ ನೀರನ್ನು ಇತರರಿಗೆ ನೀಡಬೇಕು ಎಂದು ಕಾಂಗ್ರೆಸ್ ನಾಯಕ ಸುರೇಶ್ ಜಾಧವ್ ಎಚ್ಚರಿಸಿದ್ದಾರೆ.
ಖಾನಾಪುರ ತಾಲೂಕಿನಲ್ಲಿ ಕುಡಿಯುವ ಹಾಗೂ ಕೃಷಿ ನೀರಿಗೆ ಆದ್ಯತೆ ನೀಡದೆ, ಹೊರಗಿನ ಪ್ರದೇಶಗಳಿಗೆ ನೀರು ನೀಡಲಾಗುತ್ತಿರುವುದನ್ನು ಖಂಡಿಸಿ ತಾಲೂಕು ಬ್ಲಾಕ್ ಕಾಂಗ್ರೆಸ್ ಶಾಸಕರು ಹಾಗೂ ಸ್ಥಳೀಯ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದೆ. ಈ ಕುರಿತು ಮಾತನಾಡಿದ ಕಾಂಗ್ರೆಸ್ ನಾಯಕ ಸುರೇಶ್ ಜಾಧವ್, “ತಾಲೂಕಿನಲ್ಲಿ ಉಲ್ಟಾ ಗಂಗೆ ಹರಿಯುತ್ತಿದ್ದು, ಸ್ಥಳೀಯರಿಗೆ ನೀರು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ನಮ್ಮ ತಾಲೂಕಿನ ಜನಪ್ರತಿನಿಧಿಗಳು ತಮ್ಮ ವೈಯಕ್ತಿಕ ರಾಜಕೀಯ ಲಾಭಕ್ಕಾಗಿ ಮತ್ತು ಸ್ವಾರ್ಥಕ್ಕಾಗಿ ನೀರಿನ ಒಪ್ಪಂದ ಮಾಡಿಕೊಂಡು ಮೌನಕ್ಕೆ ಶರಣಾಗಿದ್ದಾರೆಯೇ?” ಎಂದು ಪ್ರಶ್ನಿಸಿದರು. ಬಿಜೆಪಿ ಮತ್ತು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಮ್‌ಇಎಸ್) ನಾಯಕರ ನಿಗೂಢ ಮೌನವು ಸಾರ್ವಜನಿಕರಲ್ಲಿ ಸಾಲು ಸಾಲು ಅನುಮಾನಗಳನ್ನು ಹುಟ್ಟುಹಾಕಿದೆ ಎಂದು ಆರೋಪಿಸಿದರು. ಮಲಪ್ರಭಾ ನದಿಯ ನೀರನ್ನು ಬೇರೆಡೆಗೆ ತಿರುಗಿಸುತ್ತಿರುವುದನ್ನು ಈಗಲೇ ತಡೆಯದಿದ್ದರೆ ಭವಿಷ್ಯದಲ್ಲಿ ಇಡೀ ತಾಲೂಕು ಮರುಭೂಮಿಯಾಗುವ ಭೀತಿ ಎದುರಾಗಲಿದೆ ಎಂದು ಎಚ್ಚರಿಸಿದ ಅವರು, ತಾಲೂಕಿನ ನೀರಿನ ಹಕ್ಕು ಕಸಿಯಲು ಯತ್ನಿಸಿದರೆ ಕಾಂಗ್ರೆಸ್ ಸುಮ್ಮನೆ ಕುಳಿತುಕೊಳ್ಳುವುದಿಲ್ಲ ಎಂದು ಗಂಭೀರ ಎಚ್ಚರಿಕೆ ನೀಡಿದರು.

