Vijaypura

ತಿಕೋಟಾ ಪರೀಕ್ಷಾ ಕೇಂದ್ರದಲ್ಲಿ ಗೊಂದಲ: ಒಎಂಆರ್ ವಿವಾದಕ್ಕೆ ಕೆಇಎ ಸ್ಪಷ್ಟನೆ

Share

ನಿನ್ನೆ ರಾಜ್ಯಾದ್ಯಂತ ನಡೆದ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆ ವೇಳೆ ವಿಜಯಪುರ ಜಿಲ್ಲೆಯ ತಿಕೋಟಾದ ಪರೀಕ್ಷಾ ಕೇಂದ್ರದಲ್ಲಿ ಗೊಂದಲ ಉಂಟಾಯಿತು. ಪ್ರಶ್ನೆ ಪತ್ರಿಕೆ ಮತ್ತು ಒಎಂಆರ್ ಶೀಟ್ ಸಂಖ್ಯೆಗಳು ಹೊಂದಾಣಿಕೆ ಯಾಗುತ್ತಿಲ್ಲ ಎಂದು ಆರೋಪಿಸಿ ಅಭ್ಯರ್ಥಿಗಳು ಪ್ರತಿಭಟನೆ ನಡೆಸಿದ್ದರು. ಆದರೆ ಈ ಕುರಿತು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸ್ಪಷ್ಟನೆ ನೀಡಿದ್ದು, ಎರಡೂ ಸಂಖ್ಯೆಗಳು ಒಂದೇ ಆಗಿರಬೇಕೆಂಬ ನಿಯಮವೇ ಇಲ್ಲ ಎಂದು ತಿಳಿಸಿದೆ. ಈ ಕುರಿತು ಒಂದು ವರದಿ.

ವಿಜಯಪುರ ಜಿಲ್ಲೆಯ ತಿಕೋಟಾ ಪಟ್ಟಣದ ಶಾರದಾಂಬಾ ಪಿಯು ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ರವಿವಾರ ನಡೆದ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆ ವೇಳೆ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಜಿಲ್ಲೆಯಲ್ಲಿ ಒಟ್ಟು 61 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, 24 ಸಾವಿರ 434 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದರು. ಪರೀಕ್ಷೆ ಆರಂಭವಾಗುತ್ತಿದ್ದಂತೆ ಕೆಲ ಅಭ್ಯರ್ಥಿಗಳು ಪ್ರಶ್ನೆ ಪತ್ರಿಕೆಯ ಕ್ರಮ ಸಂಖ್ಯೆ ಮತ್ತು ಒಎಂಆರ್ ಉತ್ತರ ಪತ್ರಿಕೆಯ ಸಂಖ್ಯೆ ಒಂದೇ ಆಗಿಲ್ಲ ಎಂದು ಆರೋಪಿಸಿ ಪರೀಕ್ಷಾ ಕೇಂದ್ರದ ಹೊರಗೆ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಪೊಲೀಸರು ಬಲ ಪ್ರಯೋಗಿಸಿ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ಇನ್ನೂ ಈ ಘಟನೆ ರಾಜಕೀಯ ಸ್ವರೂಪವೂ ಪಡೆದುಕೊಂಡಿತು. ಬಿಜೆಪಿ ಮುಖಂಡರು ಪತ್ರಿಕಾಗೋಷ್ಠಿ ನಡೆಸಿ, ಪ್ರಶ್ನೆಪತ್ರಿಕೆ ವಿತರಣೆಯಲ್ಲಿ ವಿಳಂಬ ಹಾಗೂ ಒಎಂಆರ್ ಶೀಟ್ ಗೊಂದಲದ ಬಗ್ಗೆ ಪ್ರಶ್ನಿಸಿದ ಅಭ್ಯರ್ಥಿಗಳ ಸಮಸ್ಯೆ ಬಗೆಹರಿಸುವ ಬದಲು ಅವರ ಮೇಲೆಯೇ ಲಾಠಿ ಪ್ರಹಾರ ನಡೆಸಿ, ಕೆಲವರನ್ನು ವಶಕ್ಕೆ ಪಡೆದಿರುವುದು ಖಂಡನೀಯ ಎಂದು ಆರೋಪಿಸಿದರು. ಅಲ್ಲದೆ, ನೀಟ್ ಪರೀಕ್ಷೆ ಸಂದರ್ಭದಲ್ಲಿ ಕೇಂದ್ರ ಸರ್ಕಾರವನ್ನು ಟೀಕಿಸಿದ್ದ ಕಾಂಗ್ರೆಸ್ ಸರ್ಕಾರ ಈಗ ಪೊಲೀಸ್ ನೇಮಕಾತಿ ಪರೀಕ್ಷೆಯ ಅವ್ಯವಸ್ಥೆ ಬಗ್ಗೆ ಮೌನ ವಹಿಸಿರುವುದು ಏಕೆ ಎಂದು ಪ್ರಶ್ನಿಸಿ, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

ಇನ್ನೊಂದೆಡೆ ಈ ವಿವಾದಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸ್ಪಷ್ಟನೆ ನೀಡಿದ್ದು, ಒಎಂಆರ್ ಉತ್ತರ ಪತ್ರಿಕೆಯ ಸಂಖ್ಯೆ ಮತ್ತು ಪ್ರಶ್ನೆ ಪತ್ರಿಕೆಯ ಕ್ರಮ ಸಂಖ್ಯೆ ಒಂದೇ ಆಗಿರಬೇಕೆಂಬ ಯಾವುದೇ ನಿಯಮ ಇಲ್ಲ ಎಂದು ಹೇಳಿದೆ. ಒಎಂಆರ್ ಉತ್ತರ ಪತ್ರಿಕೆಯಲ್ಲಿ ಅಭ್ಯರ್ಥಿಗಳು ಪ್ರಶ್ನೆ ಪತ್ರಿಕೆಯ ಕ್ರಮ ಸಂಖ್ಯೆ ಹಾಗೂ ವರ್ಷನ್ ಕೋಡ್ ಅನ್ನು ಪ್ರತ್ಯೇಕವಾಗಿ ನಮೂದಿಸಲು ಅವಕಾಶ ನೀಡಲಾಗಿದೆ. ಎರಡೂ ಸಂಖ್ಯೆಗಳು ಒಂದೇ ಆಗಬೇಕಾಗಿದ್ದರೆ, ಅವುಗಳನ್ನು ಪ್ರತ್ಯೇಕವಾಗಿ ಬರೆಯುವ ಸೂಚನೆ ನೀಡುವ ಅಗತ್ಯವೇ ಇರಲಿಲ್ಲ ಎಂದು ಕೆಇಎ ವಿವರಿಸಿದೆ. ತಿಕೋಟಾದ ಶಾರದಾಂಬಾ ಪಿಯು ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಕೆಲ ಅಭ್ಯರ್ಥಿಗಳು ಒಎಂಆರ್ ಉತ್ತರ ಪತ್ರಿಕೆ ಮತ್ತು ಪ್ರಶ್ನೆ ಪತ್ರಿಕೆ ಸಮೇತ ಪರೀಕ್ಷಾ ಕೇಂದ್ರದಿಂದ ಹೊರಬಂದಿರುವ ಘಟನೆ ಕುರಿತು ಜಿಲ್ಲಾಧಿಕಾರಿಗಳಿಂದ ವರದಿ ಕೇಳಲಾಗಿದೆ ಎಂದೂ ಅವರು ತಿಳಿಸಿದ್ದಾರೆ.

ಒಂದೆಡೆ ಅಭ್ಯರ್ಥಿಗಳ ಆಕ್ರೋಶ, ಮತ್ತೊಂದೆಡೆ ಕೆಇಎ ಸ್ಪಷ್ಟನೆ… ಈ ಬೆಳವಣಿಗೆ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆಯನ್ನು ಸುತ್ತುವರಿದಿದ್ದ ಗೊಂದಲಕ್ಕೆ ಹೊಸ ತಿರುವು ನೀಡಿದೆ. ಈಗ ಜಿಲ್ಲಾಧಿಕಾರಿಗಳ ವರದಿಯ ಆಧಾರದ ಮೇಲೆ ಸರ್ಕಾರ ಅಥವಾ ಕೆಇಎ ಯಾವ ಕ್ರಮ ಕೈಗೊಳ್ಳಲಿದೆ ಎಂಬುದರತ್ತ ಅಭ್ಯರ್ಥಿಗಳ ಚಿತ್ತ ನೆಟ್ಟಿದೆ.

ವಿಜಯಕುಮಾರ ಸಾರವಾಡ
ಇನ್ ನ್ಯೂಜ್
ವಿಜಯಪುರ.

Tags:

error: Content is protected !!