ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿರುವ ಪ್ರಸಿದ್ಧ ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಮುಂದುವರಿದಿದ್ದು, ನೀರಿನ ಸಂಗ್ರಹ 40 ಟಿಎಂಸಿ ಗಡಿ ದಾಟಿದೆ. ಪ್ರಸ್ತುತ ಡ್ಯಾಮ್ಗೆ ಭಾರಿ ಪ್ರಮಾಣದಲ್ಲಿ ನೀರು ಹರಿದುಬರುತ್ತಿದ್ದರೂ, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ನೀರಿನ ಲಭ್ಯತೆ ಗಣನೀಯವಾಗಿ ಕಡಿಮೆಯಾಗಿದೆ.
ವಿಜಯನಗರ ಜಿಲ್ಲೆಯ ತುಂಗಭದ್ರಾ ಜಲಾಶಯದ ನೀರಿನ ಮಟ್ಟ ಇಂದು 1,611.59 ಅಡಿಗಳಿಗೆ ತಲುಪಿದ್ದು, ಒಟ್ಟು ನೀರಿನ ಸಂಗ್ರಹ 40.805 ಟಿಎಂಸಿಯಷ್ಟಾಗಿದೆ. ಜಲಾಶಯಕ್ಕೆ ಕಳೆದ 24 ಗಂಟೆಗಳಲ್ಲಿ ಸರಾಸರಿ 25,811 ಕ್ಯೂಸೆಕ್ ಒಳಹರಿವು ದಾಖಲಾಗಿದ್ದು, ಪ್ರಸ್ತುತ 24,468 ಕ್ಯೂಸೆಕ್ ನೀರು ನಿರಂತರವಾಗಿ ಹರಿದುಬರುತ್ತಿದೆ. ಆದರೆ ನದಿಗೆ ಹಾಗೂ ಕಾಲುವೆಗಳಿಗೆ ಕಳೆದ 24 ಗಂಟೆಗಳಲ್ಲಿ ಕೇವಲ 1,195 ಕ್ಯೂಸೆಕ್ ಸರಾಸರಿ ಹೊರಹರಿವು ಬಿಡಲಾಗಿದೆ. ಕಳೆದ ವರ್ಷದ ಇದೇ ದಿನಾಂಕದಂದು ಜಲಾಶಯದಲ್ಲಿ ಬರೋಬ್ಬರಿ 78.272 ಟಿಎಂಸಿ ನೀರು ಸಂಗ್ರಹವಿತ್ತು, ಆದರೆ ಈ ಬಾರಿ ಪ್ರಸ್ತುತ ಕೇವಲ 40.805 ಟಿಎಂಸಿ ನೀರು ಮಾತ್ರ ಲಭ್ಯವಿರುವುದರಿಂದ ಕಳೆದ ವರ್ಷಕ್ಕೆ ಹೋಲಿಸಿದರೆ ನೀರಿನ ಮಟ್ಟ ಗಣನೀಯವಾಗಿ ಕಡಿಮೆಯಾಗಿದೆ.

