ರಸ್ತೆಗೆ ಅಡ್ಡಲಾಗಿ ನಿಲ್ಲಿಸಿದ್ದ ಆಟೋವನ್ನು ಬದಿಗೆ ಸರಿಸುವಂತೆ ಹೇಳಿದ್ದ ವಿಚಾರಕ್ಕೆ ಬಸ್ ಕಂಡಕ್ಟರ್ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ನಡೆಸಿರುವ ಘಟನೆ ವಿಜಯಪುರ ಜಿಲ್ಲೆಯ ಆಲಮೇಲ ತಾಲ್ಲೂಕಿನ ಕಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.

ಸಿಂದಗಿ ಯಿಂದ ಮದರಿ ಗ್ರಾಮಕ್ಕೆ ತೆರಳುತ್ತಿದ್ದ ಬಸ್ನ ಕಂಡಕ್ಟರ್ ಮಲ್ಲು ಲಮಾಣಿ ಮೇಲೆ ಸಂತೋಷ ದೇವೂರ ಹಾಗೂ ಆತನ ಸಹಚರರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ನಿನ್ನೆ ಆಟೋವನ್ನು ಸೈಡ್ಗೆ ಹಾಕುವಂತೆ ಹೇಳಿದ್ದ ವಿಚಾರವನ್ನೇ ನೆಪ ಮಾಡಿ ಕೊಂಡು ಇಂದು ದಾಳಿ ನಡೆಸಲಾಗಿದೆ ಎನ್ನಲಾಗಿದೆ.
ಹಲ್ಲೆಯ ವೇಳೆ ಆರೋಪಿಗಳು ಕಂಡಕ್ಟರ್ಗೆ ಮನಬಂದಂತೆ ಥಳಿಸಿದ್ದು, ಎದೆಗೆ ಬಲವಾಗಿ ಗುದ್ದಿದ ಪರಿಣಾಮ ಮಲ್ಲು ಲಮಾಣಿ ರಸ್ತೆಯಲ್ಲೇ ಕುಸಿದು ಬಿದ್ದಿದ್ದಾರೆ. ಈ ದೃಶ್ಯವನ್ನು ಬಸ್ನಲ್ಲಿದ್ದ ಪ್ರಯಾಣಿಕರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದು, ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಷ್ಟೇ ಅಲ್ಲದೆ, ಹಲ್ಲೆಯ ದೃಶ್ಯವನ್ನು ಮೊಬೈಲ್ನಲ್ಲಿ ಚಿತ್ರೀಕರಿಸುತ್ತಿದ್ದ ವ್ಯಕ್ತಿಯ ಮೇಲೂ ಆರೋಪಿಗಳು ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಈ ಘಟನೆ ಆಲಮೇಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
