ಯರಗಟ್ಟಿ ಹಾಗೂ ಗೋಕಾಕ ತಾಲೂಕಿನ ಘಟಪ್ರಭಾ ಬಲದಂಡೆ ಮುಖ್ಯ ಕಾಲುವೆಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಇಂದು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾಲುವೆ ಹಾನಿಯಾಗಿ ನೀರು ದುರ್ಬಳಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ತಕ್ಷಣವೇ ರಿಪೇರಿ ಮಾಡಿ ರೈತರು ಮತ್ತು ಜಾನುವಾರುಗಳಿಗೆ ಸಮರ್ಪಕವಾಗಿ ನೀರು ತಲುಪಿಸುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.


ಯರಗಟ್ಟಿ ತಾಲೂಕಿನ ಕೊಡ್ಲಿವಾಡ, ಮುಗ್ಲಿಹಾಳ ಹಾಗೂ ಗೋಕಾಕ ತಾಲೂಕಿನ ಕೌಜಲಗಿ ಸಮೀಪ ಹಾದುಹೋಗಿರುವ ಘಟಪ್ರಭಾ ಬಲದಂಡೆ ಮುಖ್ಯ ಕಾಲುವೆ (ಜಿಆರ್‌ಬಿಸಿ) ಭಾಗಗಳಿಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಇಂದು ಖುದ್ದಾಗಿ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಕಾಲುವೆಯ ವಿವಿಧ ಭಾಗಗಳಲ್ಲಿ ಹಾನಿಯಾಗಿರುವ ಕಾರಣ ನೀರು ಸರಾಗವಾಗಿ ಹರಿಯುತ್ತಿಲ್ಲ ಎಂಬ ದೂರುಗಳು ಕೇಳಿಬಂದಿದ್ದವು. ಪರಿಣಾಮ ಕಾಲುವೆ ಅಂಚಿನ ಗ್ರಾಮಗಳ ಸಾರ್ವಜನಿಕರಿಗೆ ಹಾಗೂ ಜಾನುವಾರುಗಳಿಗೆ ಅಗತ್ಯ ಪ್ರಮಾಣದಲ್ಲಿ ನೀರು ತಲುಪದೇ ತೊಂದರೆಯಾಗುತ್ತಿತ್ತು. ಈ ಸಮಸ್ಯೆಯ ಗಂಭೀರತೆಯನ್ನು ಅರಿತು ಸಚಿವರೇ ನೇರವಾಗಿ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ವೀಕ್ಷಿಸಿದರು.

ಸ್ಥಳ ಪರಿಶೀಲನೆ ನಡೆಸಿದ ಬಳಿಕ ಸಚಿವ ಸತೀಶ್ ಜಾರಕಿಹೊಳಿ ಅವರು ಮಾತನಾಡಿ, “ಕಳೆದ 10 ದಿನಗಳಿಂದ ಜಿಆರ್‌ಬಿಸಿ ಕಾಲುವೆಗೆ ನೀರು ಬಿಡಲಾಗಿದ್ದರೂ, ಮುಖ್ಯ ಕಾಲುವೆಯಲ್ಲಿ ನೀರು ಸೋರಿಕೆಯಾಗುತ್ತಿರುವ (leakage) ಕಾರಣ ನೀರು ಸಂಪೂರ್ಣವಾಗಿ ಮುಂದೆ ಹರಿಯುತ್ತಿಲ್ಲ. ಹೀಗಾಗಿ ಹೆಚ್ಚುವರಿಯಾಗಿ 10 ಸೆಕ್ಷನ್ ನೀರು ಬಿಟ್ಟು ರೈತರಿಗೆ ತಲುಪಿಸುವ ಪ್ರಯತ್ನ ಮಾಡುತ್ತಿದ್ದೇವೆ. ಅಲ್ಲದೆ 3 ಸ್ಥಳಗಳಲ್ಲಿ ಹಾನಿಯಾಗಿರುವ ಕಾಲುವೆಯನ್ನು ಆದಷ್ಟು ಬೇಗ ರಿಪೇರಿ ಮಾಡಿ ಹಾಗೂ ವಿಸ್ತರಣೆ ಮಾಡಿ, ರೈತರಿಗೆ ಸರಿಯಾಗಿ ನೀರು ತಲುಪಿಸಲು ಎಲ್ಲಾ ಕ್ರಮ ವಹಿಸಲಾಗುವುದು,” ಎಂದು ಭರವಸೆ ನೀಡಿದರು.
ಪರಿಶೀಲನೆ ವೇಳೆ ಕಾಲುವೆಯ ಹಾನಿಗೊಳಗಾದ ಭಾಗಗಳನ್ನು ತಕ್ಷಣವೇ ಸರಿಪಡಿಸಿ, ನೀರಿನ ಹರಿವು ಸುಗಮವಾಗುವಂತೆ ಅಗತ್ಯ ತುರ್ತು ಕ್ರಮಗಳನ್ನು ಕೈಗೊಳ್ಳಲು ಸಂಬಂಧಪಟ್ಟ ನೀರಾವರಿ ಮತ್ತು ಸಂಬಂಧಿತ ಇಲಾಖೆಯ ಅಧಿಕಾರಿಗಳಿಗೆ ಸಚಿವರು ಸೂಕ್ತ ನಿರ್ದೇಶನ ನೀಡಿದರು. ಕೊನೆಯ ಹಂತದ ಭಾಗಗಳಿಗೂ ನೀರು ತಲುಪುವಂತೆ ನೋಡಿಕೊಳ್ಳಬೇಕು ಹಾಗೂ ಯಾವುದೇ ಕಾರಣಕ್ಕೂ ಗ್ರಾಮಸ್ಥರಿಗೆ ಮತ್ತು ಜಾನುವಾರುಗಳಿಗೆ ನೀರಿನ ಅಭಾವ ಉಂಟಾಗದಂತೆ ತ್ವರಿತವಾಗಿ ಕೆಲಸ ಮುಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

