Khanapur

ಖಾನಾಪುರದ ನೀರಿನ ಹಕ್ಕಿಗೆ ಕಂಟಕ?: ಮಲಪ್ರಭಾ ನೀರು ಎತ್ತುವ ಯೋಜನೆಗೆ ಕಾಂಗ್ರೆಸ್ ಮುಖಂಡ ಸುರೇಶ್ ಜಾಧವ್ ವಿರೋಧ

Share

ಖಾನಾಪೂರ ತಾಲೂಕಿನ ಭವಿಷ್ಯಕ್ಕೆ ಅತ್ಯಂತ ಮಹತ್ವದ್ದೆಂದು ಪರಿಗಣಿಸಲಾಗಿರುವ ಮಲಪ್ರಭಾ ನದಿಯಿಂದ ನೀರು ಎತ್ತುವ ಹಾಗೂ ಬೇರೆಡೆಗೆ ತಿರುಗಿಸುವ ವಿವಿಧ ಯೋಜನೆಗಳ ಹಿನ್ನೆಲೆಯಲ್ಲಿ ತಾಲೂಕಿನ ನೀರಿನ ಭದ್ರತೆ ಪ್ರಶ್ನೆಯ ವಿಷಯ ಮತ್ತೆ ಚರ್ಚೆಗೆ ಬಂದಿದೆ. ನದಿಯಿಂದ ದೊಡ್ಡ ಪ್ರಮಾಣದಲ್ಲಿ ನೀರನ್ನು ಎತ್ತುವ ಪ್ರಸ್ತಾವಿತ ಹಾಗೂ ಈಗಾಗಲೇ ಜಾರಿಯಲ್ಲಿರುವ ಯೋಜನೆಗಳಿಂದ ಭವಿಷ್ಯದಲ್ಲಿ ಖಾನಾಪೂರ ತಾಲೂಕಿನ ಕುಡಿಯುವ ನೀರು, ಕೃಷಿ ನೀರಾವರಿ ಹಾಗೂ ಜಲಸಂಗ್ರಹದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬ ಆತಂಕವನ್ನು ಸಾರ್ವಜನಿಕರು, ರೈತರು ಹಾಗೂ ಸಾಮಾಜಿಕ ಕಾರ್ಯಕರ್ತರು ವ್ಯಕ್ತಪಡಿಸುತ್ತಿದ್ದಾರೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸ್ಥಳೀಯ ಕಾಂಗ್ರೆಸ್ ಪಕ್ಷವೂ ಈ ಯೋಜನೆಗಳಿಗೆ ವಿರೋಧ ವ್ಯಕ್ತಪಡಿಸಿದೆ.

ಇದರ ಬಗ್ಗೆ ಕಾಂಗ್ರೆಸ್ ಮುಖಂಡ ಸುರೇಶ್ ಜಾಧವ ಅವರು ಪಾರಿಶ್ವಾಡ (Siddanbhavi TFS) ಯೋಜನೆಯಿಂದ ಸುಮಾರು 28.40 ಎಂಸಿಎಫ್‌ಟಿ (MCFT) ಹಾಗೂ ಕುಸಮಳಿ (ಜಾಂಬೋಟಿ)ಯ Santobastwad TFS ಯೋಜನೆಯಿಂದ ಸುಮಾರು 30 ಎಂಸಿಎಫ್‌ಟಿ ನೀರನ್ನು ಎತ್ತುವ ಪ್ರಕ್ರಿಯೆ ನಡೆಯುತ್ತಿದೆ. ಇದಲ್ಲದೆ ಕಳಸಾ ಡೈವರ್ಷನ್ ಯೋಜನೆ (1.72 ಟಿಎಂಸಿ) ಹಾಗೂ *ಭಾಂಡೂರಾ ನಾಲಾ ಡೈವರ್ಷನ್ ಯೋಜನೆ (2.18 ಟಿಎಂಸಿ)ಗಳ ವಿಷಯವೂ ಇನ್ನೂ ಚರ್ಚೆಯಲ್ಲಿದ್ದು, ಈ ಯೋಜನೆಗಳ ಕುರಿತು ನ್ಯಾಯಾಲಯದಲ್ಲಿ ಪ್ರಕರಣಗಳು ಬಾಕಿ ಇರುವುದಾಗಿ ತಿಳಿದುಬಂದಿದೆ.

ಪ್ರತಿ ವರ್ಷ ಬೇಸಿಗೆ ವೇಳೆಯಲ್ಲಿ ಖಾನಾಪೂರ ತಾಲೂಕಿನ ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ತೀವ್ರ ಕೊರತೆ ಉಂಟಾಗುತ್ತದೆ. ಕೆಲವು ಕಡೆಗಳಲ್ಲಿ ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ ಮಾಡಬೇಕಾಗುತ್ತದೆ. ರೈತರೂ ನೀರಾವರಿಗೆ ನೀರಿನ ಕೊರತೆಯಿಂದಾಗಿ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ತಾಲೂಕಿನ ನದಿಪಾತ್ರದಿಂದ ದೊಡ್ಡ ಪ್ರಮಾಣದಲ್ಲಿ ನೀರನ್ನು ಹೊರತೆಗೆದು ಬೇರೆಡೆಗೆ ಸಾಗಿಸಲಾಗುತ್ತಿರುವುದರಿಂದ ಭವಿಷ್ಯದ ನೀರಿನ ಭದ್ರತೆ ಕುರಿತು ಗಂಭೀರ ಪ್ರಶ್ನೆಗಳು ಉದ್ಭವಿಸಿವೆ ಎಂದು ಕಾಂಗ್ರೆಸ್ ಮುಖಂಡ ಸುರೇಶ್ ಜಾಧವ ಅವರು ಆಂತಕ ವ್ಯಕ್ತಪಡಿಸಿದ್ದಾರೆ.

ಸಾರ್ವಜನಿಕರೊಂದಿಗೆ ಸುರೇಶ್ ಜಾಧವ ಅವರು ಕೇಳುತ್ತಿರುವ ಪ್ರಮುಖ ಪ್ರಶ್ನೆಯೇನೆಂದರೆ, ಪಂಪಿಂಗ್ ಸ್ಟೇಷನ್, ಪೈಪ್‌ಲೈನ್ ಹಾಗೂ ಅಗತ್ಯ ಮೂಲಸೌಕರ್ಯ ನಿರ್ಮಾಣವಾದ ನಂತರ ಭವಿಷ್ಯದಲ್ಲಿ ನೀರಿನ ಎತ್ತುವಿಕೆ ಕೇವಲ ಮಿತ ಪ್ರಮಾಣದಲ್ಲೇ ನಡೆಯುತ್ತದೆ ಎಂಬ ಭರವಸೆಯನ್ನು ಯಾರು ನೀಡುತ್ತಾರೆ? ಹಾಗೆಯೇ ಈ ಯೋಜನೆಗಳ ದೀರ್ಘಕಾಲೀನ ಪರಿಣಾಮಗಳೇನು ಎಂಬುದರ ಕುರಿತು ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸ್ಪಷ್ಟ ನಿಲುವು ಪ್ರಕಟಿಸಬೇಕು ಎಂಬ ಬೇಡಿಕೆ ಇದೆ

ಈ ಹಿನ್ನೆಲೆದಲ್ಲಿ ಖಾನಾಪೂರದ ಶಾಸಕ ವಿಠ್ಠಲ ಹಲಗೆಕರ್, ಸಂಸದ ವಿಶ್ವೇಶ್ವರ ಹೆಗಡೆ-ಕಾಗೇರಿ ಹಾಗೂ ಸ್ಥಳೀಯ ಬಿಜೆಪಿ ಮುಖಂಡರು ಈ ವಿಷಯದ ಕುರಿತು ತಮ್ಮ ಸ್ಪಷ್ಟ ನಿಲುವನ್ನು ಪ್ರಕಟಿಸಬೇಕು ಎಂಬ ಒತ್ತಾಯಿಸಿದ ಸುರೇಶ್ ಜಾಧವ ಅವರು ಜೊತೆಗೆ ವಿವಿಧ ರಾಜಕೀಯ ಪಕ್ಷಗಳು, ಸಾಮಾಜಿಕ ಸಂಘಟನೆಗಳು ಹಾಗೂ ಸ್ಥಳೀಯ ನಾಯಕರು ಪಕ್ಷಾತೀತವಾಗಿ ಒಂದಾಗಿ ಖಾನಾಪೂರ ತಾಲೂಕಿನ ನೀರಿನ ಹಕ್ಕಿನ ರಕ್ಷಣೆಗೆ ಮುಂದಾಗಬೇಕು ಎಂಬ ಅಭಿಪ್ರಾಯವೂ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ನಾಗರಿಕರ ಅಭಿಪ್ರಾಯದಂತೆ, ಇದು ಯಾವುದೇ ಒಂದು ರಾಜಕೀಯ ಪಕ್ಷದ ಅಥವಾ ರಾಜಕೀಯ ವಿವಾದದ ಪ್ರಶ್ನೆಯಲ್ಲ. ಇದು ಖಾನಾಪೂರ ತಾಲೂಕಿನ ಭವಿಷ್ಯದ ನೀರಿನ ಭದ್ರತೆ, ಕೃಷಿ ಹಾಗೂ ಮುಂದಿನ ಪೀಳಿಗೆಯ ಹಿತಾಸಕ್ತಿಗೆ ಸಂಬಂಧಿಸಿದ ಅತ್ಯಂತ ಮಹತ್ವದ ವಿಷಯವಾಗಿದೆ. ಆದ್ದರಿಂದ ಎಲ್ಲಾ ಪಕ್ಷಗಳ ಸಭೆ ನಡೆಸಿ ನೈಜ ಪರಿಸ್ಥಿತಿಯನ್ನು ಜನರ ಮುಂದೆ ಇಡಬೇಕು ಹಾಗೂ ಈ ಯೋಜನೆಗಳ ಕುರಿತು ಸರ್ಕಾರ ಅಧಿಕೃತ ಮಾಹಿತಿಯನ್ನು ಸಾರ್ವಜನಿಕರಿಗೆ ಪ್ರಕಟಿಸಬೇಕು ಎಂಬ ಬೇಡಿಕೆ ಮುಂದಿಟ್ಟಲಾಗಿದೆ.

ಇದರ ಮಧ್ಯೆ, ಈ ವಿಷಯದ ಕುರಿತು ಬಿಜೆಪಿ ಪದಾಧಿಕಾರಿಗಳು, ಮಹಾರಾಷ್ಟ್ರ ಏಕೀಕರಣ ಸಮಿತಿಯ ನಾಯಕರು ಹಾಗೂ ಇತರ ಸ್ಥಳೀಯ ನಾಯಕರ ನಿಲುವೇನು ಎಂಬುದರತ್ತ ಸಾರ್ವಜನಿಕರ ಗಮನ ನೆಟ್ಟಿದ್ದು, ಖಾನಾಪೂರದ ನೀರಿನ ಹಕ್ಕಿನ ಪ್ರಶ್ನೆಯಲ್ಲಿ ಎಲ್ಲರೂ ತಮ್ಮ ಸ್ಪಷ್ಟ ನಿಲುವು ಪ್ರಕಟಿಸಬೇಕು ಎಂಬ ನಿರೀಕ್ಷೆಯನ್ನು ಜನರು ವ್ಯಕ್ತಪಡಿಸುತ್ತಿದ್ದಾರೆ.

Tags:

error: Content is protected !!