Belagavi

ಪ್ರತಿಯೊಬ್ಬರ ಜೀವನದಲ್ಲಿ ಆಧ್ಯಾತ್ಮಿಕ ಜ್ಞಾನ ಅವಶ್ಯಕ: ವಿಧ್ಯಾ ದೀದಿ

Share

ಇಂದಿನ ಕಾಲದಲ್ಲಿ ಪರಮಪಿತ ಪರಮಾತ್ಮ ಶಿವನೇ ನಮ್ಮ‌ ನಿಜವಾದ ಸದ್ಗುರು ಆಗಿದ್ದಾರೆ ಎಂದು ಬ್ರಹ್ಮಕುಮಾರಿ ವಿಧ್ಯಾ ದೀದಿ ತಿಳಿಸಿದರು.

ಗುರುಪೂರ್ಣಿಮಾ ನಿಮಿತ್ತ ನಗರದ ಅನಗೋಳ ಬ್ರಹ್ಮಕುಮಾರೀಸ್ ಕೇಂದ್ರದಲ್ಲಿ‌ ನಡೆದ ವಿಶೇಷ ಸರ್ವಧರ್ಮ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರತಿಯೊಬ್ಬರ ಜೀವನದಲ್ಲಿ ಗುರುಗಳ ಪಾತ್ರ ಸಕಾರಾತ್ಮಕ ಬದಲಾವಣೆ ತರುತ್ತದೆ. ಆಧ್ಯಾತ್ಮ, ರಾಜಯೋಗ ಸದಾಚಾರ, ಸಂಸ್ಕ್ರತಿ ಕಲಿಸುತ್ತದೆ. ಒತ್ತಡರಹಿತ ಜೀವನ ಮಾಡಲು ನಮಗೆ ಶಾಂತಿ ಸಂಯಮ, ಗುರಿ ಮತ್ತು ಗುರು ಇರಬೇಕು. ಮಾನವ ಜೀವನದ ಕಲ್ಯಾಣಕ್ಕಾಗಿ ನಾವೆಲ್ಲ ಒತ್ತಡರಹಿತ ಜೀವನದಿಂದ ಹೊರಬರಬೇಕು ಎಂದರು.

ಪ್ರಸಿದ್ದ ವೈದ್ಯರಾದ ಡಾ. ಆಂಟೋನಿಯ ಕಾರ್ವಾಲೊ ಅವರು ಮಾತನಾಡಿ ಸಮಾಜದಲ್ಲಿ ಹೆಚ್ಚುತ್ತಿರುವ ಅಶಾಂತಿ, ಜಂಜಾಟ ಹಾಗೂ ಒತ್ತಡದ ಬಗ್ಗೆ ಖೇದ ವ್ಯಕ್ತಪಡಿಸಿದರು. ಸ್ವಾರ್ಥ ಚಿಂತನೆ ಹಾಗೂ ನಿರರ್ಥಕ ವಿಚಾರಗಳಿಂದ ಮಾನಸಿಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ. ಇಂತ ಸಮಯದಲ್ಲಿ ಆಧ್ಯಾತ್ಮಿಕ ಚಿಂತನೆ ನಮಗೆ ಸಹಾಯಕ ಎಂದರು.
ಭಾರತೀಯ ಸಂಸ್ಕೃತಿಯ ಗೌರವವನ್ನು ಎತ್ತಿ ಹಿಡಿಯುತ್ತಾ ಶ್ರೀ ಸಿದ್ಧಯ್ಯ ಹಿರೇಮಠ್ ಅವರು ಜೀವನಕ್ಕೆ ಸರಿಯಾದ ದಿಕ್ಕು ನೀಡುವಲ್ಲಿ ಗುರುಗಳ ಪ್ರಮುಖ ಸ್ಥಾನದ ಬಗ್ಗೆ ಮಾತನಾಡಿದರು. ಅವರು ವರ್ಷಗಳಿಂದ ರಾಜಯೋಗ ಅಭ್ಯಾಸದಿಂದ ಪಡೆದ ಸಕಾರಾತ್ಮಕ ಅನುಭವಗಳನ್ನು ಹಂಚಿಕೊಂಡರು.

ತೇಜಜ್ಞಾನ ಫೌಂಡೇಶನ್ (ಹ್ಯಾಪಿ ಥಾಟ್ಸ್) ನ ಪ್ರತಿನಿಧಿಗಳಾದ ಶ್ರೀ ಸಂಗ್ರಾಮ್ ಗೋಡ್ಸೆ ಮತ್ತು ಶ್ರೀ ರಾಜಕುಮಾರ್ ಅವರು ಆಲೋಚನೆಗಳಲ್ಲಿ ಬದಲಾವಣೆಯಿಂದ ಮಾತ್ರ ಜೀವನದಲ್ಲಿ ಬದಲಾವಣೆ ಸಾಧ್ಯ ಎಂದು ಹೇಳಿದರು. ಅಜ್ಞಾನದಿಂದ ಜ್ಞಾನದ ಬೆಳಕಿನತ್ತ ಕರೆದೊಯ್ಯುವಲ್ಲಿ ಗುರುಗಳ ಪಾತ್ರವನ್ನು ಅವರು ಎತ್ತಿ ತೋರಿಸಿದರು ಮತ್ತು ಸರ್ವಧರ್ಮ ಸಮಭಾವಕ್ಕಾಗಿ ಬ್ರಹ್ಮಾಕುಮಾರೀಸ್ ನಡೆಸುತ್ತಿರುವ ಪ್ರಯತ್ನಗಳನ್ನು ಮುಕ್ತವಾಗಿ ಪ್ರಶಂಸಿಸಿದರು.

ಕಾರ್ಯಕ್ರಮವನ್ನು ಬಿ.ಕೆ. ಸಹೋದರಿ ಶೋಭಾ ಅವರು ಅತ್ಯಂತ ಸಮರ್ಥವಾಗಿ ನಿರ್ವಹಿಸಿದರು. ಅವರು ಉಪಸ್ಥಿತರಿದ್ದ ಎಲ್ಲಾ ಸದಸ್ಯರಿಗೂ ಆಳವಾದ ರಾಜಯೋಗ ಧ್ಯಾನದ ಅನುಭವವನ್ನು ಮಾಡಿಸಿದರು. ಕೊನೆಯಲ್ಲಿ ಬಿ.ಕೆ. ಸಂತೋಷ್ ಭಾಯಿ ಅವರು ಎಲ್ಲರಿಗೂ ಧನ್ಯವಾದ ತಿಳಿಸಿದರು ಮತ್ತು ಎಲ್ಲರೂ ನಿರಂತರವಾಗಿ ಒಬ್ಬ ಪರಮಾತ್ಮನ ಧ್ಯಾನದಲ್ಲಿ ತೊಡಗಿರಬೇಕು ಎಂದು ಕರೆ ನೀಡಿದರು.

Tags:

error: Content is protected !!