ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಉತ್ತರ ಕರ್ನಾಟಕದ ಜೀವನಾಡಿ ಯಾಗಿರುವ ಕೃಷ್ಣಾ ನದಿ ತುಂಬಿ ಹರಿಯುತ್ತಿದೆ. ನಮ್ಮ ರಾಜ್ಯದಲ್ಲಿ ಮಳೆ ಕೊರತೆಯಿದ್ದರೂ ಪ್ರತಿವರ್ಷ ವಿಜಯಪುರ, ಬಾಗಲಕೋಟೆ, ಯಾದಗಿರಿ, ಕಲಬುರಗಿ ಹಾಗೂ ರಾಯಚೂರು ಜಿಲ್ಲೆಗಳ ಲಕ್ಷಾಂತರ ಜನರು ಮತ್ತು ಜಾನುವಾರುಗಳಿಗೆ ಜೀವಜಲ ಒದಗಿಸುವ ಕೃಷ್ಣಾ ಮಾತೆಗೆ ಕೃತಜ್ಞತೆ ಸಲ್ಲಿಸುವ ವಿಶಿಷ್ಟ ಸಂಪ್ರದಾಯವಾಗಿ ರೈತರು ಮಹಾರಾಷ್ಟ್ರದ ಮಹಾಬಳೇಶ್ವರದಲ್ಲಿರುವ ಉಗಮಸ್ಥಳ ಪಂಚಗಂಗಾ ದೇವಸ್ಥಾನದಲ್ಲಿ 25ನೇ ವರ್ಷದ ಗಂಗಾಪೂಜೆ ನೆರವೇರಿಸಿ ಬಾಗಿನ ಅರ್ಪಿಸಿದರು. ಈ ಕುರಿತು ಇಲ್ಲಿದೆ ಡಿಟೇಲ್ಸ್..


ನೆರೆ ರಾಜ್ಯ ಮಹಾರಾಷ್ಟ್ರದ ಮಹಾಬಳೇಶ್ವರದ ಪಂಚಗಂಗಾ ದೇವಸ್ಥಾನದಲ್ಲಿ ಮಾಜಿ ಸಚಿವ ಸಂಗಣ್ಣ ಕೆ. ಬೆಳ್ಳುಬ್ಬಿ ನೇತೃತ್ವದಲ್ಲಿ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಯ ನೂರಕ್ಕೂ ಹೆಚ್ಚು ರೈತರು, ಮಹಿಳೆಯರು ಮತ್ತು ಭಕ್ತರು ವಿಶೇಷ ಪೂಜೆ ಸಲ್ಲಿಸಿದರು. ಗುರುಪೂರ್ಣಿಮೆಯ ಅಂಗವಾಗಿ ನಡೆದ ಈ ಪೂಜೆಯಲ್ಲಿ ಕೃಷ್ಣಾ ಮಾತೆಗೆ ಬಾಗಿನ ಅರ್ಪಿಸಿ, ಉತ್ತಮ ಮಳೆ, ಸಮೃದ್ಧ ಬೆಳೆ ಹಾಗೂ ರೈತರ ಸುಖಶಾಂತಿಗಾಗಿ ಪ್ರಾರ್ಥಿಸಲಾಯಿತು.ಪಶ್ಚಿಮ ಘಟ್ಟದ ಮಹಾಬಳೇಶ್ವರದಲ್ಲಿರುವ ಪಂಚಗಂಗಾ ಕ್ಷೇತ್ರವು ಕೃಷ್ಣಾ, ಗಾಯತ್ರಿ, ಸಾವಿತ್ರಿ, ಕೋಯ್ನಾ ಹಾಗೂ ವೆನ್ನಾ ನದಿಗಳ ಉಗಮಸ್ಥಳ ಎಂಬ ಧಾರ್ಮಿಕ ಮಹತ್ವ ಹೊಂದಿದೆ. ದೇವಸ್ಥಾನದಲ್ಲಿರುವ ಗೋವಿನ ಮೂರ್ತಿಯ ಬಾಯಿಯಿಂದ ಈ ಐದು ನದಿಗಳು ಉಗಮವಾಗುತ್ತವೆ ಎಂಬ ನಂಬಿಕೆ ಇದೆ. ಈ ಕಾರಣದಿಂದ ಪಂಚಗಂಗಾ ಕ್ಷೇತ್ರ ದೇಶದ ಪ್ರಮುಖ ಪುಣ್ಯಕ್ಷೇತ್ರಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ.

ತಾವು ಶಾಸಕರಾಗಿದ್ದ ಕಾಲದಿಂದಲೇ ಸಂಗಣ್ಣ ಕೆ. ಬೆಳ್ಳುಬ್ಬಿ ಈ ಸಂಪ್ರದಾಯವನ್ನು ಆರಂಭಿಸಿದ್ದು, ಇದೀಗ 25ನೇ ವರ್ಷವೂ ನಿರಂತರವಾಗಿ ಮುಂದುವರಿಸಿದ್ದಾರೆ. ಈ ಬಾರಿ ತಮ್ಮ ಪತ್ನಿ ಹಾಗೂ ಕೊಲ್ಹಾರದ ಹಿರೇಮಠದ ಶ್ರೀ ಕೈಲಾಸನಾಥ ಶಿವಾಚಾರ್ಯ ಸ್ವಾಮೀಜಿ ಯವರೊಂದಿಗೆ ವಿಶೇಷ ಪೂಜೆ ಸಲ್ಲಿಸಿ ಕೃಷ್ಣಾ ಮಾತೆಗೆ ಕೃತಜ್ಞತೆ ಅರ್ಪಿಸಿದರು. ಮಹಾರಾಷ್ಟ್ರದಲ್ಲಿ ರೆಡ್ ಅಲರ್ಟ್ ನಡುವೆ ಭಾರೀ ಮಳೆ ಸುರಿಯುತ್ತಿದ್ದರೂ ಭಕ್ತರು ಭಕ್ತಿಭಾವದಿಂದ ಪೂಜೆಯಲ್ಲಿ ಪಾಲ್ಗೊಂಡರು. ಕೃಷ್ಣೆ ಉತ್ತರ ಕರ್ನಾಟಕದ ಜೀವನಾಡಿ. ಈ ನದಿ ನಮ್ಮ ರೈತರು, ಜನರು ಮತ್ತು ಜಾನುವಾರುಗಳಿಗೆ ಜೀವಜಲ ನೀಡುತ್ತಿದೆ. ಆ ಕೃತಜ್ಞತೆಯ ಸಂಕೇತವಾಗಿ ಕಳೆದ 25 ವರ್ಷಗಳಿಂದ ಗಂಗಾಪೂಜೆ ನಡೆಸುತ್ತಿದ್ದೇವೆ. ಉತ್ತಮ ಮಳೆ, ಸಮೃದ್ಧ ಬೆಳೆ ಮತ್ತು ಎಲ್ಲರ ಒಳಿತಿಗಾಗಿ ಪ್ರಾರ್ಥಿಸಿದರು.
ಇನ್ಬೂ ಈ ವರ್ಷದ ಗಂಗಾಪೂಜೆಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಡಿ. ಅಂಗಡಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಬಿರಾದಾರ್, ರಾಮಣ್ಣ ಬಾಟಿ, ವಿಜಯ ಪೂಜಾರಿ, ಶ್ರೀಶೈಲ್ ಒಡಗಲ್, ಅಶೋಕ್ ಗಿಡ್ಡಪಗೋಳ, ಶೇಕು ಗಾಣಿಗೇರ್, ಆನಂದ ಬಿಷ್ಟಗೊಂಡ, ಈರಪ್ಪ ಜಿದ್ದಿಬಾಗಿಲ, ಪುಟ್ಟು ತೇಲಿ, ಕಸ್ತೂರಿ ಬೆಳ್ಳುಬ್ಬಿ, ರೇಣುಕಾ ಅಂಥನಿ, ಮಲ್ಲು ಕಲಾದಗಿ ಸೇರಿದಂತೆ 100ಕ್ಕೂ ಹೆಚ್ಚು ರೈತರು ಹಾಗೂ ಮಹಿಳೆಯರು ಭಾಗವಹಿಸಿದ್ದರು. ಒಟ್ಟಾರೆ 25 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಈ ಗಂಗಾಪೂಜೆ ಉತ್ತರ ಕರ್ನಾಟಕದ ರೈತರ ಭಕ್ತಿ, ಪ್ರಕೃತಿಯ ಮೇಲಿನ ಕೃತಜ್ಞತೆ ಮತ್ತು ಕೃಷ್ಣಾ ನದಿಯೊಂದಿಗೆ ಇರುವ ಭಾವನಾತ್ಮಕ ಸಂಬಂಧದ ಪ್ರತೀಕವಾಗಿದೆ.
ವಿಜಯಕುಮಾರ ಸಾರವಾಡ
ಇನ್ ನ್ಯೂಜ್
ವಿಜಯಪುರ.
