Belagavi

ನೆರೆ ರಾಜ್ಯಕ್ಕೆ ಕರ್ನಾಟಕದ ನೀರು ಬಿಟ್ಟರೆ ಹುಷಾರ್!!!

Share

ಕಾವೇರಿ, ಮಹಾದಾಯಿ ಹಾಗೂ ಕೃಷ್ಣಾ ನದಿಗಳ ನೀರನ್ನು ಬೇರೆ ರಾಜ್ಯಗಳಿಗೆ ಬಿಡುತ್ತಿರುವುದನ್ನು ಖಂಡಿಸಿ ಬೆಳಗಾವಿಯಲ್ಲಿ ಕರವೇ ಕಾರ್ಯಕರ್ತರು ಉರುಳು ಸೇವೆ ನಡೆಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕನ್ನಡಿಗರ ಹಕ್ಕನ್ನು ರಕ್ಷಿಸದಿದ್ದರೆ ಮುಖ್ಯಮಂತ್ರಿಗಳಿಗೆ ಖಾಲಿ ಕೊಡ ಹಾಗೂ ಚೆಂಬು ನೀಡುವುದಾಗಿ ಹೋರಾಟಗಾರರು ಖಡಕ್ ಎಚ್ಚರಿಕೆ ನೀಡಿದ್ದಾರೆ.

ನೀರನ್ನು ಯಾವುದೇ ಕಾರಣಕ್ಕೂ ಬೇರೆ ರಾಜ್ಯಗಳಿಗೆ ಬಿಡಬಾರದು ಎಂದು ಒತ್ತಾಯಿಸಿ ಬೆಳಗಾವಿಯ ರಾಣಿ ಚೆನ್ನಮ್ಮ ವೃತ್ತದಲ್ಲಿ ಕರವೇ (ಶಿವರಾಮೇಗೌಡ ಬಣ) ಕಾರ್ಯಕರ್ತರು ಉರುಳು ಸೇವೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಮಾಧ್ಯಮಗಳ ಮುಂದೆ ನೀರು ಬಿಡುವುದಿಲ್ಲ ಎಂದು ಹೇಳಿ ಹಿಂಬಾಗಿಲ ಮೂಲಕ ತಮಿಳುನಾಡಿಗೆ ನೀರು ಹರಿಸುವುದನ್ನು ತಕ್ಷಣ ನಿಲ್ಲಿಸಬೇಕೆಂದು ಆಗ್ರಹಿಸಿದ ಪ್ರತಿಭಟನಾಕಾರರು, ಖಾಲಿ ಕೊಡಗಳನ್ನು ಪ್ರದರ್ಶಿಸುವ ಉರುಳು ಸೇವೆ ಮಾಡುವ ಮೂಲಕ ರಾಜ್ಯ ಸರ್ಕಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಹೋರಾಟಗಾರ ವಾಜೀದ್ ಹಿರೇಕೋಡಿ, ಕಾವೇರಿ, ಮಹಾದಾಯಿ ಮತ್ತು ಕೃಷ್ಣಾ ನೀರು ಕನ್ನಡಿಗರ ಹಕ್ಕು. ನದಿಗಳನ್ನು ಖಾಲಿ ಮಾಡಿ ನೆರೆ ರಾಜ್ಯಗಳಿಗೆ ನೀರು ಕೊಟ್ಟಿದ್ದರಿಂದ ಇಂದು ಕನ್ನಡಿಗರು ಖಾಲಿ ಬಿಂದಿಗೆ ಹಿಡಿದು ಬೀದಿಗೆ ಇಳಿಯುವಂತಾಗಿದೆ ಎಂದು ದೂರಿದರು. ತಕ್ಷಣವೇ ರಾಜ್ಯದ ನೀರನ್ನು ರಕ್ಷಿಸಬೇಕು, ಇಲ್ಲವಾದರೆ ಮುಖ್ಯಮಂತ್ರಿಗಳಿಗೆ ಖಾಲಿ ಕೊಡ ಮತ್ತು ಚೆಂಬು ನೀಡಿ ಎಚ್ಚರಿಸಬೇಕಾಗುತ್ತದೆ ಹಾಗೂ ಮಹಾರಾಷ್ಟ್ರ, ಗೋವಾ ಸಿಎಂಗಳೊಂದಿಗೆ ನೀರು ಬಿಡುವ ವಿಚಾರವಾಗಿ ಮಾತನಾಡಿದರೆ ಖಾಲಿ ಚೆಂಬು ಕೊಡ ನೀಡುವುದರೊಂದಿಗೆ ಚಡ್ಡಿ ತೊಡಿಸಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಇದೇ ವೇಳೆ ಹೋರಾಟಗಾರ ಮಹಾಂತೇಶ ರಣಗಟ್ಟಿಮಠ ಮಾತನಾಡಿ, ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಆಗುತ್ತಿರುವ ನಿರಂತರ ಅನ್ಯಾಯವನ್ನು ಖಂಡಿಸಿ ಹಾಗೂ ಕನ್ನಡಿಗರ ಹಿತರಕ್ಷಣೆಗೆ ಒತ್ತಾಯಿಸಿ ಕನ್ನಡ ಪರ ಸಂಘಟನೆಗಳ ಒಕ್ಕೂಟವು ಆಗಸ್ಟ್ 13ರಂದು ‘ಕರ್ನಾಟಕ ಬಂದ್‌’ಗೆ ಕರೆ ನೀಡಿದೆ ಎಂದು ಘೋಷಿಸಿದರು. ಹಿಂಬಾಗಿಲ ನೀರು ಹರಿವನ್ನು ಸಂಪೂರ್ಣವಾಗಿ ತಡೆಯಲು ರಾಜ್ಯದ ಸಮಸ್ತ ಜನತೆ ಹಾಗೂ ಸಂಘಟನೆಗಳು ಈ ಬಂದ್‌ಗೆ ಸಂಪೂರ್ಣ ಬೆಂಬಲ ನೀಡಬೇಕೆಂದು ಮನವಿ ಮಾಡಿದರು.

ಈ ವೇಳೆ ಕನ್ನಡ ಪರ ಹೋರಾಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ಹೋರಾಟಗಾರರು ಭಾಗಿಯಾಗಿದ್ಧರು.

Tags:

error: Content is protected !!