2028ರ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಅವರ ನಿರ್ಧಾರಕ್ಕೆ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಪ್ರತಿಕ್ರಿಯಿಸಿದ್ದಾರೆ. ಪ್ರಸ್ತುತ ರಾಜಕೀಯ ವಾತಾವರಣ ತಮಗೂ ಬೇಸರ ತರಿಸಿದೆ ಎಂದಿರುವ ಹೊರಟ್ಟಿ, ಸಿದ್ದರಾಮಯ್ಯನಂತಹ ಅನುಭವಿ ನಾಯಕರು ನಿವೃತ್ತರಾಗುವುದು ಸೂಕ್ತವಲ್ಲ; ಅವರ ನಿರ್ಧಾರ ಹಿಂತೆಗೆದುಕೊಳ್ಳುವಂತೆ ನಾಳೆಯೇ ಮಾತುಕತೆ ನಡೆಸುವುದಾಗಿ ವಿಜಯಪುರದಲ್ಲಿ ಹೇಳಿದ್ದಾರೆ.

ರಾಜಕಾರಣ ಕಲುಷಿತಗೊಂಡಿದ್ದು 2028ರ ಬಳಿಕ ಚುನಾವಣಾ ರಾಜಕೀಯದಿಂದ ದೂರ ಉಳಿಯುವುದಾಗಿ ಮಾಜಿ ಸಿಎಂ ಸಿದ್ದರಾಮಯ್ಯ ನೀಡಿರುವ ಹೇಳಿಕೆಗೆ ವಿಜಯಪುರದಲ್ಲಿ ಪ್ರತಿಕ್ರಿಯಿಸಿದ ಬಸವರಾಜ ಹೊರಟ್ಟಿ, “ಈಗಿನ ರಾಜಕೀಯ ವಾತಾವರಣ ನೋಡಿ ಎಷ್ಟೋ ಬಾರಿ ನನಗೂ ನಿವೃತ್ತಿಯಾಗಬೇಕು ಅನಿಸಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು. ಆದರೆ, ಸಿದ್ದರಾಮಯ್ಯ ಅತ್ಯಂತ ಪ್ರಬುದ್ಧ ಹಾಗೂ ಅಪಾರ ಅನುಭವವುಳ್ಳ ನಾಯಕರಾಗಿದ್ದು, ಸಮಾಜಕ್ಕೆ ಅವರ ಮಾರ್ಗದರ್ಶನದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಎಲ್ಲರನ್ನೂ ಸಮಾನವಾಗಿ ಕರೆದೊಯ್ಯುವ ಸಾಮರ್ಥ್ಯವಿರುವ ಒಬ್ಬ ಉತ್ತಮ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಕಾರ್ಯನಿರ್ವಹಿಸುತ್ತಿರುವುದನ್ನು ನಾನು ಹತ್ತಿರದಿಂದ ನೋಡಿದ್ದೇನೆ ಎಂದ ಸಭಾಪತಿ ಹೊರಟ್ಟಿ, ಇಂತಹ ನಾಯಕರು ರಾಜಕಾರಣದಲ್ಲಿ ಮುಂದುವರಿಯುವುದು ನಾಡಿಗೆ ಅಗತ್ಯ ಎಂದರು. ಹಾಗಾಗಿ, ಸಿದ್ದರಾಮಯ್ಯ ಅವರೊಂದಿಗೆ ನಾಳೆಯೇ ಖುದ್ದಾಗಿ ಮಾತನಾಡಿ, ತಮ್ಮ ನಿವೃತ್ತಿಯ ನಿರ್ಧಾರ ಮತ್ತು ಹೇಳಿಕೆಯನ್ನು ಹಿಂತೆಗೆದುಕೊಳ್ಳುವಂತೆ ಮನವೊಲಿಸುವ ಪ್ರಯತ್ನ ಮಾಡುವುದಾಗಿ ತಿಳಿಸಿದರು.
