ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಸದ್ದು ಜೋರಾಗುತ್ತಿದ್ದಂತೆಯೇ ಅಥಣಿಯಲ್ಲಿ ಸವದಿ ಅಭಿಮಾನಿಯೊಬ್ಬರು ಅಚ್ಚರಿಯ ಶಪಥ ಮಾಡಿದ್ದಾರೆ. ಶಾಸಕ ಲಕ್ಷ್ಮಣ ಸವದಿ ಅವರಿಗೆ ಸಚಿವ ಸ್ಥಾನ ನೀಡದಿದ್ದರೆ, ಅವರು ಸಚಿವರಾಗುವವರೆಗೆ ತಲೆ ಮತ್ತು ಮೀಸೆ ಬೋಳಿಸಿಕೊಂಡೇ ಓಡಾಡುವುದಾಗಿ ಅಭಿಮಾನಿ ಪ್ರದೀಪ ನಂದಗಾವ್ ಬಹಿರಂಗ ಸವಾಲು ಹಾಕಿದ್ದಾರೆ.

ಅಥಣಿ ಶಾಸಕ ಲಕ್ಷ್ಮಣ ಸವದಿ ಅವರಿಗೆ ಈ ಬಾರಿಯ ಸಂಪುಟ ವಿಸ್ತರಣೆಯಲ್ಲಿ ಕಡ್ಡಾಯವಾಗಿ ಮಂತ್ರಿ ಸ್ಥಾನ ನೀಡಬೇಕೆಂಬ ಒತ್ತಾಯ ತೀವ್ರಗೊಂಡಿದೆ. ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಸವದಿ ಅಭಿಮಾನಿ ಪ್ರದೀಪ ನಂದಗಾವ್, “ಸಾಹುಕಾರ್ಗೆ ಸಚಿವ ಸ್ಥಾನ ಸಿಗಲೇಬೇಕು. ಒಂದು ವೇಳೆ ಸ್ಥಾನ ಸಿಗದಿದ್ದರೆ ಸವದಿಯವರು ಸಚಿವರಾಗುವ ತನಕ ನಾನು ತಲೆ ಹಾಗೂ ಮೀಸೆ ಬೋಳಿಸಿಕೊಂಡೇ ಓಡಾಡಲು ಸಿದ್ಧ” ಎಂದು ತಮ್ಮ ನೆಚ್ಚಿನ ನಾಯಕನ ಪರವಾಗಿ ವಿಶಿಷ್ಟ ರೀತಿಯಲ್ಲಿ ಬೆಂಬಲ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ ಪ್ರದೀಪ, ತಮ್ಮ ಮಗ ಬಿ.ವೈ. ವಿಜಯೇಂದ್ರ ಅವರ ರಾಜಕೀಯ ಭವಿಷ್ಯಕ್ಕಾಗಿ ಬಿಎಸ್ವೈ ಅವರು ಲಕ್ಷ್ಮಣ ಸವದಿ ಅವರಿಗೆ ಮೋಸ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು. ಸವದಿಯವರು ರಾಜಕೀಯವಾಗಿ ಇನ್ನು ಬೆಳೆಯುತ್ತಾರೆಂಬ ಭಯದಿಂದಲೇ ಬಿಎಸ್ವೈ ಈ ರೀತಿ ಮಾಡಿದ್ದಾರೆ ಎಂದ ಅವರು, ಈ ಬಾರಿಯಾದರೂ ಸವದಿ ಸಾಹುಕಾರ್ಗೆ ಅರ್ಹ ಸಚಿವ ಸ್ಥಾನ ನೀಡಿ ಗೌರವಿಸಬೇಕೆಂದು ಪಟ್ಟು ಹಿಡಿದಿದ್ದಾರೆ.
