Belagavi

ನಿಸರ್ಗದ ಮುನಿಸಿಗೆ ಸೆಡ್ಡು; ಬೆಳಗಾವಿ ತಾಲೂಕಿನಲ್ಲಿ ಭತ್ತದ ನಾಟಿ ಕಾರ್ಯ ಅಂತಿಮ ಹಂತಕ್ಕೆ.. ಮಳೆ ಆಗಮನದಿಂದ ರೈತರಿಗೆ ನಿರಾಳ!

Share

ಮಳೆ ಕೈಕೊಟ್ಟು ಎದುರಾಗಿದ್ದ ಬಾರೀ ಆತಂಕ ಹಾಗೂ ಮರು ಬಿತ್ತನೆಯ ಸಂಕಷ್ಟದ ನಂತರ ಕೊನೆಗೂ ಬೆಳಗಾವಿ ತಾಲೂಕಿನ ರೈತಾಪಿ ವರ್ಗಕ್ಕೆ ದೊಡ್ಡ ಸಮಾಧಾನ ಸಿಕ್ಕಂತಾಗಿದೆ.

ಕಳೆದ ಕೆಲವು ದಿನಗಳಿಂದ ಬಿದ್ದ ಉತ್ತಮ ಮಳೆಯಿಂದಾಗಿ ಸ್ಥಗಿತಗೊಂಡಿದ್ದ ಭತ್ತದ ನಾಟಿ ಕಾರ್ಯಗಳು ಈಗ ಅಂತಿಮ ಹಂತ ತಲುಪಿವೆ. ಪ್ರಕೃತಿಯ ಏರುಪೇರಿನ ನಡುವೆಯೂ ರೈತರು ಮತ್ತೆ ಹೊಸ ಭರವಸೆಯಿಂದ ಗದ್ದೆಗಿಳಿದು ದುಡಿಯುತ್ತಿದ್ದಾರೆ.

ಬೆಳಗಾವಿ ತಾಲೂಕಿನ ಉಚಗಾಂವ್ ಮತ್ತು ಹಿಂಡಲಗಾ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಪ್ರಮುಖ ಜೀವನೋಪಾಯವಾಗಿದೆ. ಆದರೆ, ಈ ಬಾರಿಯ ಮುಂಗಾರು ಆರಂಭದಲ್ಲೇ ಎದುರಾದ ಮಳೆ ಅಭಾವದಿಂದಾಗಿ ರೈತರು ತೀವ್ರ ಸಂಕಷ್ಟ ಎದುರಿಸುವಂತಾಗಿತ್ತು. ಮಳೆ ವಿಳಂಬವಾದ್ದರಿಂದ ಉಳುಮೆ ಮತ್ತು ಬಿತ್ತನೆ ಕಾರ್ಯಗಳು ನಿಂತುಹೋಗಿದ್ದವು. ಕೆಲವು ಕಡೆ ಬೆಳೆಗಳು ಒಣಗಿ ಹೋಗಿ ರೈತರಿಗೆ ಮರು ಬಿತ್ತನೆಯ ಆರ್ಥಿಕ ಮತ್ತು ಮಾನಸಿಕ ಅಭದ್ರತೆ ಎದುರಾಗಿತ್ತು.

ನೀರಿನ ಅಭಾವ ಹಾಗೂ ಬೆಳೆಯ ಬೆಳವಣಿಗೆ ಕುಂಠಿತಗೊಂಡಿದ್ದರಿಂದ ಸಂಪೂರ್ಣ ಗ್ರಾಮೀಣ ಭಾಗ ಚಿಂತಾಕ್ರಾಂತವಾಗಿತ್ತು.ಆದರೆ, ಕಳೆದ 8 ರಿಂದ 10 ದಿನಗಳಿಂದ ಮಳೆ ಮತ್ತೆ ಅಬ್ಬರಿಸಿ ಬೊಬ್ಬಿಟ್ಟಿರುವುದರಿಂದ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಭೂಮಿಗೆ ಅಗತ್ಯವಿದ್ದ ತೇವಾಂಶ ಸಿಕ್ಕಿದ್ದರಿಂದ ಉಚಗಾಂವ್, ಹಿಂಡಲಗಾ ಹಾಗೂ ಸುತ್ತಮುತ್ತಲಿನ ಕೆಸರು ಗದ್ದೆಗಳಲ್ಲಿ ಭತ್ತದ ಸಸಿ ನಾಟಿ ಮಾಡುವ ಕಾರ್ಯ ಭರದಿಂದ ಸಾಗಿದೆ. ಮಹಿಳೆಯರು ಮತ್ತು ಪುರುಷ ರೈತರು ಹಗಲಿರುಳು ಶ್ರಮಿಸಿ ತಮ್ಮ ಬೆಳೆಯನ್ನುಳಿಸಿಕೊಳ್ಳಲು ಶ್ರಮಿಸುತ್ತಿದ್ದು, ಮಳೆಯ ಈ ಮರು ಆಗಮನದಿಂದ ತಾಲೂಕಿನ ಅನ್ನದಾತ ಕೊನೆಗೂ ನಿಟ್ಟುಸಿರು ಬಿಡುವಂತಾಗಿದೆ.

Tags:

error: Content is protected !!