Kittur

ಎಂ.ಕೆ. ಹುಬ್ಬಳ್ಳಿ–ಸಂಪಗಾವಿ ಸೇತುವೆ ನಿರ್ಮಾಣಕ್ಕೆ ಚಾಲನೆ: ಶಾಸಕ ಬಾಬಾಸಾಹೇಬ ಪಾಟೀಲ ಅವರಿಗೆ ರೈತರ ಕೃತಜ್ಞತೆ

Share

ಬೆಳಗಾವಿ ಜಿಲ್ಲೆಯ ಕಿತ್ತೂರು ಕ್ಷೇತ್ರದ ಎಂ.ಕೆ. ಹುಬ್ಬಳ್ಳಿ ಹಾಗೂ ಸಂಪಗಾವಿ ಸಂಪರ್ಕಿಸುವ ರಸ್ತೆಯಲ್ಲಿನ ವರ್ಷಗಳ ಸೇತುವೆ ಸಮಸ್ಯೆಗೆ ಕೊನೆಗೂ ಮುಕ್ತಿ ಸಿಕ್ಕಿದೆ. ಲೋಕೋಪಯೋಗಿ ಇಲಾಖೆಯಿಂದ ₹3.50 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣ ಕಾಮಗಾರಿಗೆ ಶಾಸಕ ಬಾಬಾಸಾಹೇಬ ಪಾಟೀಲ ಚಾಲನೆ ನೀಡಿದ್ದು, ರೈತರ ಬಹುದಿನಗಳ ಕನಸು ನನಸಾಗಿದೆ.

ಎಂ.ಕೆ. ಹುಬ್ಬಳ್ಳಿ ಮತ್ತು ಸಂಪಗಾವಿ ನಡುವೆ ಸೂಕ್ತ ಸೇತುವೆ ಇಲ್ಲದೆ ಮಳೆಗಾಲ ಹಾಗೂ ಬೇಸಿಗೆಯಲ್ಲೂ ರೈತರು ಮತ್ತು ಸಾರ್ವಜನಿಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದರು. ಈ ಭಾಗದ ಜನರ ತೊಂದರೆಯನ್ನು ಆಲಿಸಿದ ಶಾಸಕ ಬಾಬಾಸಾಹೇಬ ಪಾಟೀಲ ಅವರು ವಿಶೇಷ ಮುತುವರ್ಜಿ ವಹಿಸಿ ₹3.50 ಕೋಟಿ ಅನುದಾನ ಮಂಜೂರು ಮಾಡಿಸಿ ಗುದ್ದಲಿ ಪೂಜೆ ನೆರವೇರಿಸಿದ್ದಾರೆ. ಇದೇ ವೇಳೆ ಮಾತನಾಡಿದ ಶಾಸಕರು, ರಸ್ತೆ ಪಕ್ಕದಲ್ಲಿರುವ ಐತಿಹಾಸಿಕ ಕೆರೆಯನ್ನು ₹2 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸುವುದು ಸೇರಿದಂತೆ ಇಟಗಿ ರಸ್ತೆ ಕಾಮಗಾರಿಗೂ ಶೀಘ್ರವೇ ಚಾಲನೆ ನೀಡುವುದಾಗಿ ಭರವಸೆ ನೀಡಿದರು. ಅಲ್ಲದೆ, ಬೆಳಗಾವಿ ಜಿಲ್ಲೆಯ ಅಭಿವೃದ್ಧಿಗೆ ವೇಗ ನೀಡಲು ಹೈಕಮಾಂಡ್ ಅರ್ಹರಿಗೆ ಸಚಿವ ಸ್ಥಾನ ನೀಡಬೇಕೆಂದು ಮನವಿ ಮಾಡಿರುವುದಾಗಿ ತಿಳಿಸಿದರು.

ಅರ್ಧಕ್ಕೆ ನಿಂತಿದ್ದ ಕೆರೆ ಕಾಮಗಾರಿಗೆ ಮರುಜೀವ ನೀಡಿ, ನೂತನ ಸೇತುವೆ ನಿರ್ಮಾಣಕ್ಕೆ ಅನುದಾನ ತಂದು ಕಾಮಗಾರಿಗೆ ಚಾಲನೆ ನೀಡಿದ ಶಾಸಕರಿಗೆ ಸ್ಥಳೀಯ ರೈತ ಮುಖಂಡರು ಮತ್ತು ಸಾರ್ವಜನಿಕರು ಹೃತ್ಪೂರ್ವಕ ಧನ್ಯವಾದ ಅರ್ಪಿಸಿದ್ದಾರೆ. ಪ್ರಸ್ತುತ ಆರಂಭವಾಗಿರುವ ಸೇತುವೆ ಕಾಮಗಾರಿ ಹಾಗೂ ಕೆರೆ ಅಭಿವೃದ್ಧಿ ಕೆಲಸಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಕೆರೆಗೆ ನೀರು ತುಂಬಿಸಿದರೆ ಸುತ್ತಮುತ್ತಲಿನ ಹಲವು ಗ್ರಾಮಗಳ ರೈತರ ಕೃಷಿ ಚಟುವಟಿಕೆಗಳಿಗೆ ಮತ್ತು ಕುಡಿಯುವ ನೀರಿಗೆ ದೊಡ್ಡ ಮಟ್ಟದ ಅನುಕೂಲವಾಗಲಿದೆ ಎಂದು ರೈತರು ಹರ್ಷ ವ್ಯಕ್ತಪಡಿಸಿದ್ದಾರೆ.

Tags:

error: Content is protected !!