ಬೆಳಗಾವಿ ಜಿಲ್ಲೆಯ ಕಿತ್ತೂರು ವಿಧಾನಸಭಾ ಕ್ಷೇತ್ರದ ಸಾರ್ವಜನಿಕರು ಹಾಗೂ ರೈತರ ಬಹುಕಾಲದ ಕನಸು ಕೊನೆಗೂ ನನಸಾಗಿದೆ. ನೇಗಿನಹಾಳ ಗ್ರಾಮದಿಂದ ಸಂಪಗಾವಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಲ್ಲಿದ್ದ ಬ್ರಿಟಿಷರ ಕಾಲದ ಶಿಥಿಲಗೊಂಡ ಸೇತುವೆಯನ್ನು ತೆರವುಗೊಳಿಸಿ, ಹೊಸ ಸೇತುವೆ ನಿರ್ಮಾಣ ಕಾರ್ಯಕ್ಕೆ ಶಾಸಕ ಬಾಬಾಸಾಹೇಬ್ ಪಾಟೀಲ್ ಅವರು ಇಂದು ಅಧಿಕೃತವಾಗಿ ಚಾಲನೆ ನೀಡಿದ್ದಾರೆ.


ಕಳೆದ ವರ್ಷವಷ್ಟೇ ಈ ರಾಜ್ಯ ಹೆದ್ದಾರಿಯನ್ನು ನೂತನವಾಗಿ ಅಭಿವೃದ್ಧಿಪಡಿಸಿ ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತು. ಆದರೆ, ಈ ರಸ್ತೆಯ ಮಧ್ಯೆ ಇದ್ದ ಬ್ರಿಟಿಷರ ಕಾಲದ ಹಳೆಯ ಸೇತುವೆ ಸಂಪೂರ್ಣವಾಗಿ ಜರ್ಜರಿತಗೊಂಡು, ಯಾವುದೇ ಕ್ಷಣದಲ್ಲಾದರೂ ಕುಸಿದು ಬೀಳುವ ಭೀತಿ ಮೂಡಿಸಿತ್ತು. ಕಿತ್ತೂರು ಕ್ಷೇತ್ರದಲ್ಲಿ ಈ ಹಿಂದೆ ಹಲವು ಜನಪ್ರತಿನಿಧಿಗಳು ಬಂದು ಹೋದರೂ, ಸಾರ್ವಜನಿಕರು ಮತ್ತು ರೈತರು ಸಾಲು ಸಾಲು ಮನವಿಗಳನ್ನು ಸಲ್ಲಿಸಿದ್ದರೂ ಈ ಸೇತುವೆ ಭಾಗ್ಯ ಮಾತ್ರ ದೊರೆತಿರಲಿಲ್ಲ. ಯಾವುದೇ ಕ್ರಮ ಕೈಗೊಳ್ಳದ ಅಧಿಕಾರಿಗಳು ಮತ್ತು ಹಿಂದಿನ ಜನಪ್ರತಿನಿಧಿಗಳ ಧೋರಣೆಗೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದರು.

ಆದರೆ, ಹಾಲಿ ಶಾಸಕ ಬಾಬಾಸಾಹೇಬ್ ಪಾಟೀಲ್ ಅವರಿಗೆ ಸ್ಥಳೀಯ ರೈತರು ಹಾಗೂ ಸಾರ್ವಜನಿಕರು ಸಮಸ್ಯೆ ಮುಟ್ಟಿಸಿದ ತಕ್ಷಣವೇ ಕಾರ್ಯಪ್ರವೃತ್ತರಾದ ಅವರು, ಸರ್ಕಾರದ ಮಟ್ಟದಲ್ಲಿ ವಿಶೇಷ ಮುತುವರ್ಜಿ ವಹಿಸಿ ಸುಮಾರು 4 ಕೋಟಿ ರೂಪಾಯಿಗಳ ಭಾರಿ ವೆಚ್ಚದಲ್ಲಿ ನೂತನ ಸೇತುವೆ ನಿರ್ಮಾಣಕ್ಕೆ ಅನುಮೋದನೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಂದು ಶಾಸ್ತ್ರೋಕ್ತವಾಗಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕರು, ಗುಣಮಟ್ಟದ ಕಾಮಗಾರಿಯನ್ನು ಶೀಘ್ರವಾಗಿ ಮುಗಿಸಲು ಸೂಚಿಸಿದರು. ಇಷ್ಟು ವರ್ಷಗಳ ಜ್ವಲಂತ ಸಮಸ್ಯೆಗೆ ಮುಕ್ತಿ ಸಿಕ್ಕಿರುವುದಕ್ಕೆ ಸಂಪಗಾವಿ ಮತ್ತು ನೇಗಿನಹಾಳ ಗ್ರಾಮಸ್ಥರು ಮಾಧ್ಯಮಗಳ ಮುಂದೆ ಸಂತಸ ಹಂಚಿಕೊಂಡು, ಶಾಸಕರಿಗೆ ಮನಸಾರೆ ಕೃತಜ್ಞತೆ ಸಲ್ಲಿಸಿದರು.

