ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಪ್ರತಿದಿನ ಜೀವ ಭಯದಲ್ಲೇ ಸಂಚರಿಸುವ ಭೀಕರ ವಾತಾವರಣ ನಿರ್ಮಾಣವಾಗಿದೆ. ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು ಬಸ್ನ ಬಾಗಿಲಿಗೆ ಜೋತುಬಿದ್ದು ಶಾಲೆಗೆ ತೆರಳುತ್ತಿದ್ದು, ಮಕ್ಕಳ ಸುರಕ್ಷತೆಯ ಬಗ್ಗೆ ತೀವ್ರ ಆತಂಕ ವ್ಯಕ್ತವಾಗಿದೆ.

ರಾಜ್ಯದಲ್ಲಿ ಗ್ಯಾರಂಟಿ ಗುಂಗಲ್ಲಿರೋ ಕಾಂಗ್ರೆಸ್ ಸರ್ಕಾರ ಮಕ್ಕಳ ಪಾಲಿಗೆ ರಕ್ಷಾ ಕವಚವಾಗಬೇಕಿತ್ತು, ಆದ್ರೆ ಈ ವೀಡಿಯೊಗಳನ್ನೊಮ್ಮೆ ನೋಡಿ, ಶಾಲೆಗೆ ಹೋಗೋ ಮಕ್ಕಳು ಎಷ್ಟು ಸುರಕ್ಷಿತವಾಗಿದ್ದಾರೆ ಅಂತಾ.. ಇದು ಇಡೀ ಉತ್ತರ ಕರ್ನಾಟಕದಲ್ಲಿ ಕಾಣಿಸೋ ಕಾಮನ್ ವೀಡಿಯೊಗಳು. ಇಲ್ಲಿ ಬಡವರ ಮಕ್ಕು ಅಂದ್ರೆ ಬೆಲೆ ಇಲ್ಲದಂತಾಗಿದೆ. ಕಾರಣ ಮಕ್ಕು ಶಾಲೆಗೆ ಹೋಗ್ಲೆ ಬೇಕು ಅಂತಾ ಅಂದ್ರೆ. ಜೀವ ಕೈಯಲ್ಲೇ ಹಿಡಿದು ಹೋಗಬೇಕು.
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಸತ್ತಿ,ಜೂಂಜುರವಾಡ, ಕೊಕಟನೂರ, ಹಾಗೂ ಖಿಳೆಗಾಂವಿ, ಆಜೂರ್, ಸಂಬರಗಿ, ಸೇರಿದಂತೆ ಹಲವು ಗ್ರಾಮಗಳ ವಿದ್ಯಾರ್ಥಿಗಳ ಗೋಳಿದು. ಅಥಣಿ ನಗರಕ್ಕೆ ಹೋಗೋ ವಿದ್ಯಾರ್ಥಿಗಳಿಗೆ ಇಲ್ಲಿ ಬಸ್ ವ್ಯವಸ್ಥೆ ಇಲ್ಲದೆ ಬಾಗಿಲಿಗೆ ಜೋತು ಬಿದ್ದು ಹೋಗೋ ಅನಿವಾರ್ಯತೆ ಎದುರಾಗಿದೆ.
ವಿದ್ಯಾರ್ಥಿಗಳು ಹಲವು ಬಾರಿ ಬೀದಿಗಿಳಿದು ಪ್ರತಿಭಟನೆ ಮಾಡಿದ್ರು ಕಿವಿಗೊಡದ ಇಲಾಖೆ, ಶಾಲಾ ಮಕ್ಕಳ ಭವಿಷ್ಯಕ್ಕೆ ಕೊಳ್ಳಿ ಇಡುತ್ತಿರುವ ಆರೋಪ ಕೇಳಿ ಬಂದಿದೆ. ಕೂಡಲೇ ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸಿ ವಿದ್ಯಾರ್ಥಿಗಳ ಬಾಳಲ್ಲಿ ಬೆಳಕು ಚೆಲ್ಲೋ ಕೆಲಸ ಆಗುತ್ತಾ ಅಂತಾ ಕಾದು ನೋಡಬೇಕಿದೆ.
