ಚಿಕ್ಕೋಡಿ:ಸಮಗ್ರ ನೀರಾವರಿ ಯೋಜನೆಗೆ ಮಂಜೂರಾತಿ ಹಾಗೂ ಭೂಸ್ವಾಧಿನ ಜಮೀನಿಗೆ ಹೆಚ್ಚಿನ ಪರಿಹಾರ ನೀಡುವಂತೆ ಆಗ್ರಹಿಸಿ ಜುಲೈ 30 ರಂದು ಚಿಕ್ಕೋಡಿ ಬಸವ ವೃತ್ತದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಈ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಮನೋಜ ಮನಗೂಳಿ ಮನವಿ ಮಾಡಿದರು.

ನಗರದ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಜುಲೈ 30 ರಂದು ನಡೆಯಲಿರುವ ಈ ಹೋರಾಟದಲ್ಲಿ ರೈತರ ಪರವಾಗಿ ಹಲವು ಮಠಾಧೀಶರು ಹಾಗೂ ಹಿರಿಯ ಮುಖಂಡರು ಭಾಗವಹಿಸಲಿದ್ದಾರೆ. ಮುಖ್ಯವಾಗಿ ಗೌರವಾಧ್ಯಕ್ಷರಾದ ಶಶಿಕಾಂತ ಗುರೂಜಿ, ರಾಜ್ಯಾಧ್ಯಕ್ಷ ಚೂನ್ನಪ್ಪ ಪೂಜೇರಿ, ಸಂಪದನಾ ಶ್ರೀಗಳು ಹಾಗೂ ಶಿವಪ್ರಸಾದ ದೇವರು ಈ ಪ್ರತಿಭಟನೆಯಲ್ಲಿ ಸಾನ್ನಿಧ್ಯ ವಹಿಸಿ ಬೆಂಬಲ ಸೂಚಿಸಲಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಅಂಗಡಿ ಅವರು, ಸರ್ಕಾರದ ತಾರತಮ್ಯ ನೀತಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬೆಂಗಳೂರಿನ ಬಿಡದಿ ಭಾಗದ ರೈತರ ಜಮೀನಿಗೆ ಹೆಚ್ಚಿನ ಪರಿಹಾರ ನೀಡುವ ಸರ್ಕಾರ, ಉತ್ತರ ಕರ್ನಾಟಕದ ರೈತರ ಜಮೀನುಗಳಿಗೆ ಮಾತ್ರ ಕಡಿಮೆ ಪರಿಹಾರ ನೀಡುತ್ತಿದೆ. ಈ ರೀತಿಯ ದ್ವಂದ್ವ ನೀತಿಯನ್ನು ಖಂಡಿಸಿ ಮುಂದಿನ ದಿನಗಳಲ್ಲಿ ಬೃಹತ್ ಮಟ್ಟದಲ್ಲಿ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ರೈತ ಮುಖಂಡರಾದ ಆನಂದ ಪಾಶ್ಚಾಪೂರೆ, ಸಹದೇವ ಚಿಮ್ಮಟ, ಕಲಗೌಡ ಪಾಟೀಲ, ರವೀಂದ್ರ ಕುಂಬೋಜಿ, ಮಾಳಪ್ಪಾ ತಮ್ಮದಂಡಿನ,ಸಂಜಯ ಚನ್ನವರ,ಮಲ್ಲೇಶ ಲಿಂಬಿಗಿಡದ, ಭರಮಣ್ಣ ಜುಲಪಿ, ಶ್ರೀನಿವಾಸ ಪೂಜಾರಿ, ಶಿದ್ರಾಮ ಶೇಡಬಾಳೆ, ಭರತ ಜೂಗುಳೆ, ಶಿದ್ದಲಿಂಗೇಶ್ವರ ದೊಡಮನಿ, ಕುಮಾರ ಢಂಗೇರ, ಬಸವರಾಜ ಚನ್ನವರ, ಧನಪಾಲ ಧಾಮನ್ನವರ, ವಿನೋದ ಪೂಜಾರಿ, ಬಾಳಪ್ಪಾ ಶೇಡಬಾಳೆ, ನಾಗು ಚವ್ಹಾನ, ಸದಾಶಿವ ದೊಡಮನಿ, ದಿನೇಶ ಬಾಗಿ, ಭೀಮಪ್ಪಾ ಅರಭಾವಿ ಸೇರಿದಂತೆ ಅನೇಕ ಪ್ರಮುಖರು ಉಪಸ್ಥಿತರಿದ್ದರು.
