ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನಲ್ಲಿ ಇಂದು ಬೆಳಿಗ್ಗೆಯಷ್ಟೇ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದೆ. ಹೋಟೆಲ್ನಲ್ಲಿ ಸಾರ್ವಜನಿಕರು ಉಪಹಾರ ಸೇವಿಸುತ್ತಿದ್ದ ವೇಳೆಯಲ್ಲೇ ವೇಗವಾಗಿ ಬಂದ ಲಾರಿಯೊಂದು ಹೋಟೆಲ್ಗೆ ನುಗ್ಗಿದ್ದು, ಘಟನೆಯಲ್ಲಿ ಓರ್ವ ವ್ಯಕ್ತಿ ಸ್ಥಳದಲ್ಲೇ ದುರಂತ ಅಂತ್ಯ ಕಂಡಿದ್ದಾರೆ.

ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ನಂದಿಹಳ್ಳಿ ಸಮೀಪದ ಹರಿಶಂಕರ್ ಮೈನಿಂಗ್ ಪ್ರದೇಶದಲ್ಲಿ ಈ ದುರಂತ ಸಂಭವಿಸಿದೆ. ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಏಕಾಏಕಿ ರಸ್ತೆ ಪಕ್ಕದಲ್ಲಿದ್ದ ಹೋಟೆಲ್ಗೆ ನುಗ್ಗಿದೆ. ಈ ವೇಳೆ ಹೋಟೆಲ್ನಲ್ಲಿ ಉಪಹಾರ ಸೇವಿಸುತ್ತಿದ್ದ ಬಸವರಾಜ ಎಂಬುವವರು ಲಾರಿ ಹರಿದ ತೀವ್ರತೆಗೆ ಸ್ಥಳದಲ್ಲೇ ಅಸಹಾಯಕರಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಅಪಘಾತ ಸಂಭವಿಸುತ್ತಿದ್ದಂತೆ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ವಿಷಯ ತಿಳಿಯುತ್ತಿದ್ದಂತೆ ಸಂಡೂರು ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಸಂಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾದ ಚಾಲಕನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
