Uncategorized

*ಮಾಜಿ ಸಚಿವ ಎಸ್ ಕೆ ಬೆಳ್ಳುಬ್ಬಿ ನೇತೃತ್ವದಲ್ಲಿ 25ನೇ ವರ್ಷದ ಗಂಗಾಪೂಜೆಗೆ ಮಹಾಬಳೇಶ್ವರದತ್ತ ರೈತರ ಪಯಣ; ಕೃಷ್ಣಾ ಮಾತೆಗೆ ಬಾಗಿನ ಅರ್ಪಿಸಲು ಹೊರಟ ಅವಳಿ ಜಿಲ್ಲೆಗಳ ಅನ್ನದಾತರು*

Share

ಉತ್ತರ ಕರ್ನಾಟಕದ ಜೀವನಾಡಿ ಕೃಷ್ಣಾ ನದಿಯ ಉಗಮಸ್ಥಳ ಮಹಾರಾಷ್ಟ್ರದ ಮಹಾಬಳೇಶ್ವರದಲ್ಲಿ 25ನೇ ವರ್ಷದ ನಿರಂತರ ಗಂಗಾಪೂಜೆ ಹಾಗೂ ಬಾಗಿನ ಅರ್ಪಣೆ ಕಾರ್ಯಕ್ರಮಕ್ಕಾಗಿ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ 100ಕ್ಕೂ ಹೆಚ್ಚು ರೈತರು, ರೈತ ಮಹಿಳೆಯರು ಹಾಗೂ ಮುಖಂಡರು ಮಂಗಳವಾರ ಮಹಾಬಳೇಶ್ವರಕ್ಕೆ ಪ್ರಯಾಣ ಬೆಳೆಸಿದರು.


ವಿಜಯಪುರ ನಗರದ ಹೊಸ ಪ್ರವಾಸಿ ಮಂದಿರದಿಂದ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಅವರ ನೇತೃತ್ವದಲ್ಲಿ ರೈತರ ತಂಡ ವಿಶೇಷ ವಾಹನಗಳಲ್ಲಿ ಹೊರಟಿತು. ನಾಳೆ ಮಹಾಬಳೇಶ್ವರದ ಪಂಚಗಂಗಾ ದೇವಸ್ಥಾನದಲ್ಲಿ ಕೃಷ್ಣಾ ಮಾತೆಗೆ ವಿಶೇಷ ಗಂಗಾಪೂಜೆ ಸಲ್ಲಿಸಿ ಬಾಗಿನ ಅರ್ಪಿಸಲಿದ್ದಾರೆ.
ಉತ್ತರ ಕರ್ನಾಟಕದಲ್ಲಿ ಮಳೆ ಕೊರತೆಯಿದ್ದರೂ ಪ್ರತಿವರ್ಷ ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಸುರಿಯುವ ಮಳೆಯಿಂದ ಕೃಷ್ಣಾ ನದಿ ತುಂಬಿ ಹರಿದು ವಿಜಯಪುರ, ಬಾಗಲಕೋಟೆ, ಯಾದಗಿರಿ, ಕಲಬುರಗಿ ಹಾಗೂ ರಾಯಚೂರು ಜಿಲ್ಲೆಗಳ ಜನರು ಮತ್ತು ರೈತರ ಬದುಕಿಗೆ ಜೀವಜಲ ಒದಗಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕೃಷ್ಣಾ ಮಾತೆಯ ಮೇಲಿನ ಕೃತಜ್ಞತೆಯ ಸಂಕೇತವಾಗಿ ಕಳೆದ 25 ವರ್ಷಗಳಿಂದ ಈ ಪೂಜೆ ನಿರಂತರವಾಗಿ ನಡೆಯುತ್ತಿದೆ.


ಈ ವರ್ಷದ ಯಾತ್ರೆಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಡಿ. ಅಂಗಡಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಬಿರಾದಾರ್, ರಾಮಣ್ಣ ಬಾಟಿ, ವಿಜಯ ಪೂಜಾರಿ, ಶ್ರೀಶೈಲ್ ಒಡಗಲ್, ಅಶೋಕ್ ಗಿಡ್ಡಪಗೋಳ, ಶೇಕು ಗಾಣಿಗೇರ್, ಆನಂದ ಬಿಸ್ಟಗೊಂಡ, ಈರಪ್ಪ ಜಿದ್ದಿಬಾಗಿಲ, ಪುಟ್ಟು ತೇಲಿ, ಶ್ರೀಮತಿ ಕಸ್ತೂರಿ ಬೆಳ್ಳುಬ್ಬಿ, ಶ್ರೀಮತಿ ರೇಣುಕಾ ಅಂಥನಿ, ಮಲ್ಲು ಕಲಾದಗಿ, ವಿಜಯ ಪೂಜಾರ, ಆನಂದ ಬಿಷ್ಟಗೊಂಡ, ಸೇರಿದಂತೆ 100ಕ್ಕೂ ಹೆಚ್ಚು ರೈತರು ಹಾಗೂ ಮಹಿಳೆಯರು ಪಾಲ್ಗೊಂಡಿದ್ದಾರೆ. ನೆರೆ ರಾಜ್ಯ ಮಹಾರಾಷ್ಟ್ರದ ಸಾತಾರ ಜಿಲ್ಲೆಯ ಮಹಾಬಳೇಶ್ವರದಲ್ಲಿರುವ ಪಂಚಗಂಗಾ ಕ್ಷೇತ್ರವು ಕೃಷ್ಣಾ ಸೇರಿದಂತೆ ಐದು ನದಿಗಳ ಉಗಮಸ್ಥಳವಾಗಿ ಪ್ರಸಿದ್ಧಿ ಪಡೆದಿದೆ. ಇದೇ ಪವಿತ್ರ ಕ್ಷೇತ್ರದಲ್ಲಿ ನಾಳೆ ವಿಶೇಷ ಪೂಜೆ, ಗಂಗಾಪೂಜೆ ಹಾಗೂ ಬಾಗಿನ ಅರ್ಪಣೆ ನೆರವೇರಲಿದ್ದು, ಉತ್ತರ ಕರ್ನಾಟಕದ ಸಮೃದ್ಧಿ, ಉತ್ತಮ ಮಳೆ ಹಾಗೂ ರೈತರ ಸುಭಿಕ್ಷಕ್ಕಾಗಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ.

 

Tags:

error: Content is protected !!