ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಚುನಾವಣಾ ರಾಜಕೀಯ ನಿವೃತ್ತಿ ಹಾಗೂ ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತಾಗಿ ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಬೆಳಗಾವಿಯಲ್ಲಿ ನೀಡಿರುವ ಮಹತ್ವದ ಹೇಳಿಕೆಗಳು ಈಗ ತೀವ್ರ ಕುತೂಹಲ ಮೂಡಿಸಿವೆ. ಇದರೊಂದಿಗೆ ಕುಂದಾನಗರಿ ಬೆಳಗಾವಿಯ ಮೂಲಸೌಕರ್ಯಗಳ ಅಭಿವೃದ್ಧಿಗೂ ಅವರು ಹಲವು ಭರವಸೆಗಳನ್ನು ನೀಡಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದಿನ ಚುನಾವಣಾ ರಾಜಕಾರಣದಿಂದ ಹಿಂದೆ ಸರಿಯಲಿದ್ದಾರೆ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿದ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ, ತಮ್ಮ ತಂದೆಯವರು ಸಕ್ರಿಯ ರಾಜಕಾರಣದಲ್ಲಿ ಮುಂದುವರಿಯಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಸಿದ್ದರಾಮಯ್ಯನವರು ಮುಂದಿನ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದಿದ್ದಾರೆಯೇ ಹೊರತು ರಾಜಕೀಯದಿಂದ ಸಂಪೂರ್ಣ ದೂರವಾಗುವುದಿಲ್ಲ. ಶೋಷಿತರು ಮತ್ತು ದುರ್ಬಲ ವರ್ಗದವರ ಧ್ವನಿಯಾಗಿ ಅವರು ನಿಲ್ಲಲಿದ್ದು, ಮುಂದಿನ ದಿನಗಳಲ್ಲೂ ಕಾಂಗ್ರೆಸ್ ಪಕ್ಷದ ಪರವಾಗಿ ತೀವ್ರ ಪ್ರಚಾರ ನಡೆಸಲಿದ್ದಾರೆ ಎಂದು ತಿಳಿಸಿದರು. ಇದೇ ವೇಳೆ ಸಚಿವ ಸಂಪುಟ ವಿಸ್ತರಣೆ ಕುರಿತು ಮಾತನಾಡಿ, ಹೈಕಮಾಂಡ್ ಸಿಎಂ ಅವರನ್ನು ದೆಹಲಿಗೆ ಕರೆದಿದ್ದು, ಸುದೀರ್ಘ ಚರ್ಚೆಯ ನಂತರವೇ ಅಂತಿಮ ತೀರ್ಮಾನ ಹೊರಬೀಳಲಿದೆ ಎಂದರು.
ಇಂದು ಬೆಳಗಾವಿ ಮಹಾನಗರ ಪಾಲಿಕೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವರು, ನಗರಕ್ಕೆ ನಿಂತುಹೋಗಿರುವ ಮುಖ್ಯಮಂತ್ರಿಗಳ ವಿಶೇಷ ಅನುದಾನದ ಕುರಿತು ಮಾಹಿತಿ ಪಡೆಯುವುದಾಗಿ ಭರವಸೆ ನೀಡಿದರು. ಜನಪ್ರತಿನಿಧಿಗಳ ಆಡಳಿತ ಮಂಡಳಿ ಇಲ್ಲದಿರುವ ಕಡೆಗಳಲ್ಲಿ ತಾಂತ್ರಿಕ ಕಾರಣಗಳಿಂದ ಅನುದಾನ ತಡೆಯಾಗಿರಬಹುದು, ಆದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಬರಬೇಕಾದ ಅನುದಾನವನ್ನು ಸರಿಯಾಗಿ ತಲುಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಇನ್ನು ಸ್ಮಾರ್ಟ್ ಸಿಟಿ ಯೋಜನೆಯಡಿ ‘ಎಲ್ ಆಂಡ್ ಟಿ’ ಕಂಪನಿಯು 24×7 ಕುಡಿಯುವ ನೀರಿನ ಕಾಮಗಾರಿಗಾಗಿ ರಸ್ತೆಗಳನ್ನು ಅಗೆದು ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವ ವಿಚಾರಕ್ಕೆ ಸಚಿವರು ಖಡಕ್ ಎಚ್ಚರಿಕೆ ನೀಡಿದ್ದಾರೆ. ರಸ್ತೆಗಳನ್ನು ಎಲ್ಲೆಲ್ಲಿ ಅಗೆಯಲಾಗಿದೆಯೋ, ಆಯಾ ಕಾಮಗಾರಿಯ ವ್ಯಾಪ್ತಿಯಲ್ಲೇ ಕಂಪನಿಯವರು ಅವುಗಳನ್ನು ತಕ್ಷಣವೇ ದುರಸ್ತಿಗೊಳಿಸಿ ಮೊದಲಿನಂತೆ ಮಾಡಿಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಬೆಳಗಾವಿ ಜಿಲ್ಲೆಗೆ ಅಗತ್ಯವಿರುವ ವಿಶೇಷ ಯೋಜನೆಗಳ ಪಟ್ಟಿಯನ್ನು ಪಡೆದು, ರಾಜ್ಯ ಸರ್ಕಾರದಿಂದ ಹೆಚ್ಚಿನ ಅನುದಾನ ಕೊಡಿಸುವ ಕೆಲಸ ಮಾಡುವುದಾಗಿ ಅವರು ಉಲ್ಲೇಖಿಸಿದರು.
