ನಿಪ್ಪಾಣಿ-ಮುರಗೋಡ ರಸ್ತೆಯ ದೇವಚಂದ್ ಕಾಲೇಜು ಬಳಿ ಸಾವಂತವಾಡಿಯಿಂದ ಮುಂಬೈಗೆ ಹೋಗುತ್ತಿದ್ದ ವೇಗವಾಗಿ ಬಂದ ಕಾರೊಂದು, ಎದುರಿನಿಂದ ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಆತನ ಹೆಂಡತಿ ಮತ್ತು ಮಗ ಗಂಭೀರವಾಗಿ ಗಾಯಗೊಂಡಿದ್ದಾರೆ.

ಕೋಡಣಿ ಗ್ರಾಮದ ನಿವಾಸಿ ಶಿವಾಜಿರಾವ್ ಪ್ರಭಾಕರ ಶಿಂಧೆ (೩೩) ಮೃತಪಟ್ಟ ದ್ವಿಚಕ್ರ ವಾಹನ ಸವಾರ. ಹೆಂಡತಿ ನೀತಾ ಶಿವಾಜಿರಾವ್ ಶಿಂಧೆ (೩೦) ಮತ್ತು ಮಗ ಶ್ರವಣ ಶಿವಾಜಿರಾವ್ ಶಿಂಧೆ (೯) ಗಂಭೀರವಾಗಿ ಗಾಯಗೊಂಡಿದ್ದು, ಮಗಳು ರಾಧಿಕಾ ಶಿವಾಜಿರಾವ್ ಶಿಂಧೆ (೧೨) ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾಳೆ.
ಮುಂಬೈನ ನಾಲ್ವರು ಯುವಕರು ಪ್ರವಾಸಕ್ಕಾಗಿ ಸಾವಂತವಾಡಿಗೆ ತೆರಳಿದ್ದರು. ಇತ್ತ ಮೃತ ಶಿವಾಜಿರಾವ್ ಶಿಂಧೆ ನಿಪ್ಪಾಣಿಯ ಬೆಳಗಾವಿ ನಾಕಾ ಪ್ರದೇಶದಲ್ಲಿ ಸ್ವಂತ ಲಾಂಡ್ರಿ ಅಂಗಡಿ ನಡೆಸುತ್ತಿದ್ದು, ಅವರ ಪತ್ನಿ ಮತ್ತೊಂದು ಲಾಂಡ್ರಿಯಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸ ಮುಗಿದ ನಂತರ, ಭಾನುವಾರ ಮಕ್ಕಳಿಗೆ ರಜೆ ಇದ್ದಿದ್ದರಿಂದ ಶಿವಾಜಿ ಅವರು ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ನಿಪ್ಪಾಣಿಯಲ್ಲಿರುವ ಬಂಧುಗಳ ಮನೆಗೆ ಊಟಕ್ಕೆ ತೆರಳಿದ್ದರು.
ಊಟ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದಾಗ, ಪ್ರವಾಸ ಮುಗಿಸಿ ಸಾವಂತವಾಡಿಯಿಂದ ನಿಪ್ಪಾಣಿ ಮಾರ್ಗವಾಗಿ ಮುಂಬೈಗೆ ತೆರಳುತ್ತಿದ್ದ ಕಾರು, ನಿಪ್ಪಾಣಿ-ಮುರುಗೂಡ ರಸ್ತೆಯ ಹಾಲಸಿದ್ಧನಾಥ ಸರ್ವಿಸಿಂಗ್ ಸೆಂಟರ್ ಎದುರು ಕೋಡಣಿಗೆ ತೆರಳುತ್ತಿದ್ದ ಶಿವಾಜಿ ಅವರ ದ್ವಿಚಕ್ರ ವಾಹನಕ್ಕೆ ಜೋರಾಗಿ ಡಿಕ್ಕಿ ಹೊಡೆದಿದೆ.
ಈ ಅಪಘಾತದಲ್ಲಿ ದ್ವಿಚಕ್ರ ವಾಹನ ಸಂಪೂರ್ಣ ನುಜ್ಜುಗುಜ್ಜಾಗಿದ್ದ,ಶಿವಾಜಿ ಅವರ ಬಲಗಾಲು ತೊಡೆಯ ಭಾಗದಿಂದ ತುಂಡಾಗಿ ತೀವ್ರ ರಕ್ತಸ್ರಾವವಾಗಿತ್ತು. ಮಗ ಶ್ರವಣನ ಬಲತೊಡೆ ಜಜ್ಜುಬಾರಾಗಿದ್ದು, ಹೆಂಡತಿಯ ಬಲಗಾಲು ಎರಡು ಕಡೆ ಮುರಿದಿದೆ ಅಪಘಾತದ ತಕ್ಷಣ ಕಾರಿನಲ್ಲಿದ್ದ ಇಬ್ಬರು ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದರೆ, ಇನ್ನುಳಿದ ಇಬ್ಬರನ್ನು ಸ್ಥಳೀಯ ನಾಗರಿಕರು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಕೋಡಣಿ ಗ್ರಾಮದ ಯುವಕರು ತಕ್ಷಣ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ಆರಂಭಿಸಿದರು. ಗಾಯಾಳುಗಳನ್ನು ಚಿಕಿತ್ಸೆಗಾಗಿ ನಿಪ್ಪಾಣಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಲ್ಲಿ ವೈದ್ಯರು ಲಭ್ಯವಿಲ್ಲದ ಕಾರಣ ಹೆಚ್ಚಿನ ಚಿಕಿತ್ಸೆಗೆ ಕೊಲ್ಲಾಪುರಕ್ಕೆ ಕರೆದೊಯ್ಯಲಾಯಿತು. ಆದರೆ ಮಧ್ಯರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಶಿವಾಜಿ ಮೃತಪಟ್ಟಿದ್ದಾರೆ. ಪ್ರಸ್ತುತ ಸಿಪಿಆರ್ ಆಸ್ಪತ್ರೆಯಲ್ಲಿ ಶಿವಾಜಿ ಅವರ ಪತ್ನಿ ಮತ್ತು ಮಗ ಶ್ರವಣ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ನಿಪ್ಪಾಣಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತನ ಸಹೋದರಿ ಸುಜಾತಾ ರಾಜೇಂದ್ರ ಪರಿಟ್ ದೂರು ನೀಡಿದ್ದಾರೆ. ಮೃತ ಶಿವಾಜಿ ಅವರು ತಂದೆ-ತಾಯಿ, ಪತ್ನಿ, ಮಗ, ಮಗಳು ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.
