ಮಹಾರಾಷ್ಟ್ರ ಸರ್ಕಾರವು ಕೊಲ್ಲಾಪುರ ಜಿಲ್ಲೆಯ ಇಚಲಕರಂಜಿ ನಗರಕ್ಕೆ ನೀರು ಪೂರೈಸಲು, ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಗಡಿಭಾಗದ ಕೃಷ್ಣಾ ನದಿಯಿಂದ 4 ಟಿಎಂಸಿ ನೀರು ಎತ್ತುವ ‘ರಾಧಾಕೃಷ್ಣ ಏತ ನೀರಾವರಿ ಯೋಜನೆ’ಗೆ ಅನುಮೋದನೆ ನೀಡಿರುವುದು ಗಡಿ ಭಾಗದ ರೈತರಲ್ಲಿ ತೀವ್ರ ಆತಂಕ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ.


ಇಚಲಕರಂಜಿ ನಗರದ ಸಮೀಪದಲ್ಲೇ ಪಂಚಗಂಗಾ ನದಿ ಹರಿಯುತ್ತಿದ್ದರೂ, ಸುಮಾರು 30 ಕಿ.ಮೀ ದೂರದ ಕರ್ನಾಟಕ ಗಡಿಯ ದಾನವಾಡ-ಯಡೂರ-ಕಲ್ಲೋಳ-ಚಂದೂರ ಸಂಗಮ ಪ್ರದೇಶದಿಂದ ನೀರು ಎತ್ತಲು ಮಹಾರಾಷ್ಟ್ರ ಮುಂದಾಗಿದೆ. ಇದರಿಂದ ಕಲ್ಲೋಳ ಬ್ಯಾರೇಜ್ನಲ್ಲಿ ನೀರು ಸಂಗ್ರಹ ಕಡಿಮೆಯಾಗಿ, ಚಿಕ್ಕೋಡಿ ಹಾಗೂ ನಿಪ್ಪಾಣಿ ತಾಲೂಕುಗಳ ನೂರಾರು ಹೆಕ್ಟೇರ್ ಕೃಷಿ ಭೂಮಿ ಮತ್ತು 10ಕ್ಕೂ ಹೆಚ್ಚು ಗ್ರಾಮಗಳ ಕುಡಿಯುವ ನೀರಿನ ಪೂರೈಕೆಗೆ ಭಾರಿ ಹೊಡೆತ ಬೀಳಲಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ನದಿ ದಡದಲ್ಲಿ ಶ್ರೀಗಳ ಸನ್ನಿಧಿ ಹಾಗೂ ‘ಕಿತ್ತೂರು ಕರ್ನಾಟಕ ಸೇನೆ’ಯ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರದ ಗಮನ ಸೆಳೆಯಲಾಯಿತು.

ಕರ್ನಾಟಕದ ಜನರ ನೀರಿನ ಹಕ್ಕನ್ನು ಕಸಿದುಕೊಳ್ಳಲು ಮಹಾರಾಷ್ಟ್ರ ಯತ್ನಿಸುತ್ತಿದೆ. ಯೋಜನೆ ಜಾರಿಯಾಗುವ ಮುನ್ನವೇ ಕರ್ನಾಟಕ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಮಹಾರಾಷ್ಟ್ರದೊಂದಿಗೆ ಮಾತುಕತೆ ನಡೆಸಿ ನಮ್ಮ ರೈತರ ಹಿತಾಸಕ್ತಿ ಕಾಪಾಡಬೇಕು ಎಂದು ಕಿತ್ತೂರು ಕರ್ನಾಟಕ ಸೇನೆಯ ಅಧ್ಯಕ್ಷ ನಾಗೇಶ ಮಾಳಿ ಒತ್ತಾಯಿಸಿದ್ದಾರೆ.

ಸರ್ಕಾರ ಈಗಲೇ ಎಚ್ಚೆತ್ತುಕೊಂಡು ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳದಿದ್ದರೆ, ಮುಂಬರುವ ದಿನಗಳಲ್ಲಿ ಚಿಕ್ಕೋಡಿ ಭಾಗದ ರೈತರು ನೀರಿಗಾಗಿ ತೀವ್ರ ಸಂಕಷ್ಟ ಎದುರಿಸಬೇಕಾಗುತ್ತದೆ. ಸರ್ಕಾರ ತಕ್ಷಣ ಸ್ಪಂದಿಸದಿದ್ದಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಕಿತ್ತೂರು ಕರ್ನಾಟಕ ಸೇನೆಯ ರಾಜ್ಯಾಧ್ಯಕ್ಷ ಮಹಾದೇವ ತಳವಾರ ಎಚ್ಚರಿಕೆಯನ್ನು ನೀಡಿದ್ದಾರೆ.
ಸ್ಥಳೀಯರ ನೀರಿನ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ತಕ್ಷಣವೇ ಸೂಕ್ತ ಕಾನೂನು ಹಾಗೂ ರಾಜತಾಂತ್ರಿಕ ಕ್ರಮಗಳನ್ನು ಕೈಗೊಳ್ಳಬೇಕೆಂದು ಗಡಿ ಭಾಗದ ಜನರು ಒತ್ತಾಯಿಸಿದ್ದಾರೆ.
