Chikkodi

ಚಿಕ್ಕೋಡಿಯಲ್ಲಿ ಎದೆ ಜಲ್ ಎನ್ನುವ ದೃಶ್ಯ: ಹೊಟ್ಟೆಪಾಡಿಗಾಗಿ ನೇಗಿಲು ಎಳೆದ ಹೆಂಡತಿ

Share

ಬಡತನದ ಕರಾಳ ಮುಖಕ್ಕೆ ಸಾಕ್ಷಿಯಾಗುವ ಹಾಗೂ ಪ್ರತಿಯೊಬ್ಬರ ಕಣ್ಣಂಚಿನಲ್ಲಿ ಕಣ್ಣೀರು ತರಿಸುವ ಅತ್ಯಂತ ಹೃದಯವಿದ್ರಾವಕ ಘಟನೆಯೊಂದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನಣದಿವಾಡಿ ಗ್ರಾಮದಲ್ಲಿ ನಡೆದಿದೆ. ಹೊಟ್ಟೆಪಾಡಿಗಾಗಿ ಮತ್ತು ಸಂಸಾರದ ಬಂಡಿ ಎಳೆಯಲು ಮನುಷ್ಯ ಏನೆಲ್ಲಾ ಕಷ್ಟ ಪಡಬೇಕಾಗುತ್ತದೆ ಎನ್ನುವುದಕ್ಕೆ ಈ ಘಟನೆ ಜ್ವಲಂತ ನಿದರ್ಶನವಾಗಿದೆ.

ನಣದಿವಾಡಿ ಗ್ರಾಮದ ಬಡ ರೈತ ದಂಪತಿ ಕೇದಾರಿ ನಾಯಿಕ ಹಾಗೂ ಅವರ ಪತ್ನಿ ಕವಿತಾ ಅವರದ್ದು ಕಷ್ಟದ ಬದುಕು. ಈ ದಂಪತಿಗೆ ಜೀವನ ಸಾಗಿಸಲು ಮೂರು ಎಕರೆ ಜಮೀನಿದೆ. ಮಳೆಗಾಲ ಆರಂಭವಾಗಿರುವುದರಿಂದ ಹೊಲವನ್ನು ಹದ ಮಾಡಲೇಬೇಕಾದ ಅನಿವಾರ್ಯತೆ ಎದುರಾಗಿತ್ತು. ಆದರೆ, ಭೂಮಿ ಉಳುಮೆ ಮಾಡಲು ಟ್ರ್ಯಾಕ್ಟರ್ ಬಾಡಿಗೆಗೆ ತರಲು ಈ ದಂಪತಿಯ ಬಳಿ ಹಣವಿರಲಿಲ್ಲ. ಕನಿಷ್ಠ ಎತ್ತುಗಳನ್ನು ಬಾಡಿಗೆಗೆ ಪಡೆಯಲೂ ಸಹ ಜೇಬಿನಲ್ಲಿ ಕಾಸಿರಲಿಲ್ಲ.

ಬೀಜ ಬಿತ್ತನೆಗೆ ಸಮಯ ಮಿಂಚಿ ಹೋಗಬಾರದೆಂದು, ಬೇರೆ ಯಾವುದೇ ದಾರಿ ಕಾಣದೆ ಕೊನೆಗೆ ದಂಪತಿ ಸಾಹಸಕ್ಕೆ ಕೈಹಾಕಿದ್ದಾರೆ. ಎತ್ತಿನ ಸ್ಥಾನದಲ್ಲಿ ಸ್ವತಃ ಪತ್ನಿ ಕವಿತಾ ನಿಂತು ನೇಗಿಲು ಎಳೆದರೆ, ಗಂಡ ಕೇದಾರಿ ನಾಯಿಕ ಹಿಂಭಾಗದಲ್ಲಿ ನೇಗಿಲನ್ನು ಹಿಡಿದು ಉಳುಮೆ ಮಾಡಿದ್ದಾರೆ. ಕಡು ಬಡತನದ ಮಧ್ಯೆಯೂ ಕೃಷಿಯ ಮೇಲಿನ ಪ್ರೀತಿ ಮತ್ತು ಜೀವನ ನಡೆಸುವ ಛಲ ಈ ದಂಪತಿಯನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ.

ಈ ದೃಶ್ಯವನ್ನು ಕಂಡ ಸ್ಥಳೀಯರು ಮತ್ತು ಸಾರ್ವಜನಿಕರು ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. “ದೇಶಕ್ಕೆ ಅನ್ನ ನೀಡುವ ರೈತನ ಪರಿಸ್ಥಿತಿ ಇಂದು ಹೀಗಾದರೆ, ಸರ್ಕಾರಗಳು ಘೋಷಿಸುವ ಸಾಲು ಸಾಲು ಯೋಜನೆಗಳು ಎಲ್ಲಿಗೆ ಹೋದವು? ಸೌಲಭ್ಯಗಳು ಬರೀ ಕಾಗದಕ್ಕಷ್ಟೇ ಸೀಮಿತವೇ?” ಎಂದು ಸಾರ್ವಜನಿಕರು ಆಕ್ರೋಶದೊಂದಿಗೆ ಪ್ರಶ್ನಿಸುತ್ತಿದ್ದಾರೆ.

ಸರ್ಕಾರ ಹಾಗೂ ಕೃಷಿ ಇಲಾಖೆ ತಕ್ಷಣವೇ ಗಮನಹರಿಸಿ, ಇಂತಹ ಸಂಕಷ್ಟದಲ್ಲಿರುವ ಬಡ ರೈತ ಕುಟುಂಬಕ್ಕೆ ಸೂಕ್ತ ನೆರವು ಮತ್ತು ಸೌಲಭ್ಯಗಳನ್ನು ಒದಗಿಸಬೇಕಿದೆ.

ಡಿ.ಕೆ‌.ಉಪ್ಪಾರ ಇನ್ ನ್ಯೂಸ್ ಚಿಕ್ಕೋಡಿ

Tags:

error: Content is protected !!